ಗಂಗಾವತಿ: ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನ ಸಾಮಾನ್ಯರ ಮೇಲೆ ಬರೆ ಎಳೆಯುತ್ತಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಾರ್ಟಿಯ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಪಕ್ಷದ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಹುಸೇನಸಾಬ ಗಂಗನಾಳ ಹಾಗೂ ತಾಲ್ಲೂಕು ಅಧ್ಯಕ್ಷ ಶರಣಪ್ಪ ಸಜ್ಜಿಹೊಲ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೇಂದ್ರದ ವಿರುದ್ಧ ಘೋಷಣೆ ಕೂಗಿದರು. ಈ ಬಗ್ಗೆ ಮಾತನಾಡಿದ ಹುಸೇನಸಾಬ, ಜಾಗತಿಕ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ಯಾಸ್, ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಏರಿಸಿವೆ. ಈ ಮೂಲಕ ಜನ ವಿರೋಧಿ ನೀತಿ ತಳೆಯುತ್ತಿವೆ. ಒಂದು ಲೀಟರ್ ಬ್ರಾಂಡೆಡ್ ನೀರಿನ ಬಾಟಲಿಗಿಂತಲೂ ಅಗ್ಗದಲ್ಲಿ ಅಂದರೆ ಪ್ರತಿ ಬ್ಯಾರೆಲ್ಗೆ 30 ಡಾಲರ್ ಮೊತ್ತಕ್ಕೆ ಕಚ್ಚಾ ತೈಲ ಸಿಕ್ಕುತ್ತಿದೆ. ಆದರೆ, ಇದರ ಲಾಭವನ್ನು ಸರ್ಕಾರ ಜನರಿಗೆ ಹಾಗೂ ಗ್ರಾಹಕರಿಗೆ ವರ್ಗಾಯಿಸದೇ ವಂಚಿಸುತ್ತಿದೆ ಎಂದು ಆರೋಪಿಸಿದರು.