ಕೊಪ್ಪಳ: ಬಿಸಿಲ ನಾಡಿನಲ್ಲಿ ಮೊದಲ ಬಾರಿಗೆ ಶುಂಠಿ ಬೆಳೆದ ಯುವಕನೊಬ್ಬ ಯಶಸ್ವಿಯಾಗಿದ್ದಾನೆ. ವರ್ಷದ ಹಿಂದೆ ನಾಟಿ ಮಾಡಿದ್ದ ಶುಂಠಿ ಇದೀಗ ಕಟಾವಿಗೆ ಬಂದಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾನೆ.
ಕೊಪ್ಪಳ ನಗರದ ನಿವಾಸಿಯಾದ ನಾಗರಾಜ ಚಿಲವಾಡಗಿ ಎಂಬ ಯುವಕ, ತನ್ನ ಎರಡು ಎಕರೆ ಜಮೀನಿನಲ್ಲಿ ಮೊದಲ ಬಾರಿಗೆ ಶುಂಠಿ ಬೆಳೆದಿದ್ದಾನೆ. ಈ ಮೂಲಕ ಬಿಸಿಲ ನಾಡಿನಲ್ಲಿ ಶುಂಠಿ ಬೆಳೆಯಲು ಸಾಧ್ಯವಿಲ್ಲ ಎಂಬ ಮಾತನ್ನು ಹುಸಿಗೊಳಿಸಿದ್ದಾನೆ.
ಖಾಸಗಿ ಶಾಲೆಯೊಂದನ್ನು ನಡೆಸುತ್ತಿರುವ ನಾಗರಾಜ, ಕಳೆದ ವರ್ಷದಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾನೆ. ಮಲೆನಾಡು, ಅರೆ ಮಲೆನಾಡು ಭಾಗದಲ್ಲಿ ಬೆಳೆಯಲಾಗುವ ಶುಂಠಿಯನ್ನು ಇಲ್ಲಿ ಯಾಕೆ ಬೆಳೆಯಬಾರದು ಎಂದು ಯೋಚಿಸಿ, ಕಳೆದ ವರ್ಷ ತನ್ನ ಎರಡು ಎಕರೆ ಜಮೀನಿನಲ್ಲಿ ಶುಂಠಿ ನಾಟಿ ಮಾಡಿದ್ದ. ಇದೀಗ ಶುಂಠಿ ಕಟಾವಿಗೆ ಬಂದಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾನೆ.
ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಕಳೆದೊಂದು ವರ್ಷದಿಂದ ಜನರು ಶುಂಠಿಯನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಈಗ ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಶುಂಠಿಗೆ 2,500 ರೂ. ಇದೆ. ಎಕರೆಗೆ ಸುಮಾರು 2 ಲಕ್ಷ ರೂ. ಖರ್ಚು ಮಾಡಿದ್ದೇನೆ. ಈಗ ಒಂದು ಎಕರೆಗೆ ಸುಮಾರು 200 ಕ್ವಿಂಟಾಲ್ ಇಳುವರಿ ಬಂದಿದೆ. ಸಾಮಾನ್ಯವಾಗಿ ಇನ್ನೂ ಹೆಚ್ಚಿನ ಇಳುವರಿ ಬರಬೇಕು.
ಆದರೆ, ಮೊದಲ ಬಾರಿಯಾಗಿರುವುದರಿಂದ ಎಕರೆಗೆ 200 ಕ್ವಿಂಟಾಲ್ ಇಳುವರಿ ಬರುತ್ತದೆ. ಇದರಿಂದ ನಮಗೆ ನಷ್ಟ ಆಗುವುದಿಲ್ಲ. ಎಕರೆಗೆ 200 ಕ್ವಿಂಟಾಲ್ ಇಳುವರಿ ಬಂದರೂ ಸುಮಾರು 4 ಲಕ್ಷ ರೂ. ಆಗುತ್ತದೆ. ಅದರಲ್ಲಿ 2 ಲಕ್ಷ ಖರ್ಚು ತೆಗೆದರೂ ಇನ್ನೆರಡು ಲಕ್ಷ ರೂ. ಆದಾಯ ಬಂದಂತಾಗುತ್ತದೆ. ಶುಂಠಿ ಬೆಲೆ ಹೆಚ್ಚಳವಾದರೆ ಇನ್ನಷ್ಟು ಲಾಭವಾಗುತ್ತದೆ ಎನ್ನುತ್ತಾರೆ ಶುಂಠಿ ಬೆಳೆದ ನಾಗರಾಜ ಚಿಲವಾಡಗಿ.
ಓದಿ: ಜಾನಪದ ಶೈಲಿಯಲ್ಲಿ ಹಾಡಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಪೊಲೀಸಪ್ಪ