ಕುಷ್ಟಗಿ (ಕೊಪ್ಪಳ): ಸಹೋದರ ಕುಟುಂಬಗಳ ಆಸ್ತಿ ವಿವಾದಕ್ಕೆ ಮಧ್ಯಸ್ಥಿಕೆ ವಹಿಸಿ ಬುದ್ದಿಹೇಳಿದ್ದಕ್ಕೆ ಮಾಜಿ ಸೈನಿಕನೋರ್ವನನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಇಳಕಲ್ ತಾಲೂಕಿನ ಇಲಾಳ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಹತ್ಯೆಗೀಡಾದ ಮಾಜಿ ಸೈನಿಕ ಇಲಾಳ ಗ್ರಾಮದ ನಿವಾಸಿ ವೀರಯ್ಯ ಕಾಟಾಪೂರಮಠ ಎಂದು ಗುರುತಿಸಲಾಗಿದೆ. 2003ರಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ತಮ್ಮ ಗ್ರಾಮದಲ್ಲಿ ಒಕ್ಕಲುತನ ಮಾಡಿಕೊಂಡಿದ್ದರು. ಅದೇ ಗ್ರಾಮದ ಮಹಾಂತೇಶ ಹನಮಪ್ಪ ಗೋಡಿ ಹಾಗೂ ಮಹಾಂತೇಶ ಬೊಮ್ಮಣ್ಣ ಗೋಡಿ ಕುಟುಂಬಗಳ ನಡುವೆ ಆಸ್ತಿ ವಿವಾದ ಉಂಟಾಗಿತ್ತು. ಮಹಾಂತೇಶ ಹನಮಪ್ಪ ಗೋಡಿ ಅನಕ್ಷರಸ್ಥ ಆಗಿದ್ದರಿಂದ ಜಮೀನು ದಾಖಲೆ, ಕೋರ್ಟ್ ವಿಚಾರದಲ್ಲಿ ಸೈನಿಕನ ಸಹಾಯ ಪಡೆಯುತ್ತಿದ್ದ. ಈ ವಿಚಾರವಾಗಿ ಮಾಜಿ ಸೈನಿಕ ವೀರಯ್ಯ ಕಾಟಾಪೂರಮಠ ರೈತ ಬೊಮ್ಮಣ್ಣ ಗೋಡಿಗೆ ಬುದ್ದಿವಾದ ಹೇಳಿದ್ದ. ಜತೆಗೆ ಹನಮಪ್ಪ ಗೋಡಿಗೆ ಸಹಾಯ ಮಾಡುತ್ತಿರುವುದನ್ನೇ ಇಟ್ಟುಕೊಂಡು ದ್ವೇಷ ಸಾಧಿಸಿದ್ದರು.
ಮಾಜಿ ಸೈನಿಕ ವೀರಯ್ಯ ಕಾಟಾಪೂರಮಠ ಜು.22ರಂದು ಕುಷ್ಟಗಿ ತಾಲೂಕಿನ ಕಾಟಾಪೂರ ಕ್ರಾಸ್ ಬಸ್ ನಿಲ್ದಾಣದ ಬಳಿ ನಿಂತಿದ್ದ ವೇಳೆ ಮಹಾಂತೇಶ ಬೊಮ್ಮಣ್ಣ ಗೋಡಿ ಕುಟುಂಬದವರು ಏಕಾಏಕಿ ದಾಳಿ ನಡೆಸಿ ಹಲ್ಲೆನಡೆಸಿದ್ದರು. ಅಸ್ವಸ್ಥಗೊಂಡಿದ್ದ ವೀರಯ್ಯ ಕಾಟಾಪೂರಮಠ ಕೂಡಲೇ ಬಾಗಲಕೋಟೆ ಆಸ್ಪತ್ರೆಗೆ ಕರೆದೊಯ್ಯಲಾದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದರು. ಮಾಜಿ ಸೈನಿಕನ ಪತ್ನಿ ಭುವನೇಶ್ವರಿ ನೀಡಿದ ದೂರಿನ ಮೇರೆಗೆ ಮಹಾಂತೇಶ ಬೊಮ್ಮಣ್ಣ ಗೋಡಿ ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಓದಿ: ದೆಹಲಿಯಲ್ಲಿ ಅಡಗಿ ಕುಳಿತಿದ್ದ ಹಾಸನದ ನಟೋರಿಯಸ್ ರೌಡಿಶೀಟರ್ ಚೇತು ಅರೆಸ್ಟ್