ಕುಷ್ಟಗಿ(ಕೊಪ್ಪಳ): ಶಾಲೆ ಇಲ್ಲ ಎಂದು ಅಕ್ಕ, ಅಣ್ಣನ ಜೊತೆ ಕೆಲಸಕ್ಕೆ ಹೋಗಿದ್ದ ಬಾಲಕ, ವಿದ್ಯುತ್ ಸ್ಪರ್ಶಿಸಿ ದುರ್ಮರಣಕ್ಕೀಡಾದ ಹೃದಯ ವಿದ್ರಾವಕ ಘಟನೆ ಕುಷ್ಟಗಿಯಲ್ಲಿ ಸಂಭವಿಸಿದೆ.
ಕುಷ್ಟಗಿ ಪಟ್ಟಣದ ಹೊರವಲಯದ ಕೃಷ್ಣಗಿರಿ ಕಾಲೋನಿಯ ಶಿವು ಪೇಪರ್ ಪ್ಲೇಟ್ ತಯಾರಿಕಾ ಘಟಕದಲ್ಲಿ, ಕಳೆದೆರಡು ದಿನಗಳಿಂದ ಯಮನೂರ ಹನಮಂತಪ್ಪ ಸಂಗಟಿ ಎಂಬ ಬಾಲಕ ಕೆಲಸಕ್ಕೆ ಹೋಗುತ್ತಿದ್ದ. ಘಟಕದಲ್ಲಿ ಮಶೀನ್ ಆಪರೇಟ್ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಮಶೀನ್ನಲ್ಲಿ ವಿದ್ಯುತ್ ಪ್ರವಹಿಸಿ ಅಸ್ವಸ್ಥನಾಗಿದ್ದಾನೆ. ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಬಾಲಕ ಯಮನೂರ ಬದುಕುಳಿಯಲಿಲ್ಲ.
ಕೊರೊನಾ ವೈರಸ್ ಹಾವಳಿಯಿಂದ ಜೂನ್ ಆರಂಭವಾಗಿದ್ದರೂ ಶಾಲೆ ಆರಂಭವಾಗಿಲ್ಲ. ಈ ಹಿನ್ನೆಲೆ ಶಾಲೆ ಇಲ್ಲ ಎಂದು ಕೆಲಸಕ್ಕೆ ಹೋದ ಬಾಲಕ ಜೀವ ಕಳೆದುಕೊಂಡಿರುವುದು ದುರಂತದ ಸಂಗತಿಯಾಗಿದೆ.