ಕುಷ್ಟಗಿ(ಕೊಪ್ಪಳ) : ಮಾರುತಿ ನಗರದ ಯುವಕನಿಗೆ ಸೋಂಕು ದೃಢಪಟ್ಟಿದ್ರಿಂದ ಆರೋಗ್ಯ ಇಲಾಖೆಯು ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರಾಗಿರುವ ಒಟ್ಟು 97 ಜನರನ್ನು ಪತ್ತೆ ಹಚ್ಚಿದೆ.
ಪಟ್ಟಣದ ಹೊರವಲಯದ ಮಾರುತಿ ನಗರದಲ್ಲಿ ಕೊರೊನಾ ಸೋಂಕಿತ ಯುವಕನಿಂದ 15 ಪ್ರಾಥಮಿಕ ಹಾಗೂ 82 ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಅವರಿಗೆ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ.
ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರತಿ ಮನೆಗೂ ಭೇಟಿ ನೀಡಿ ಮನೆಯ ಸದಸ್ಯರಲ್ಲಿ ಜ್ವರ, ನೆಗಡಿ, ಕೆಮ್ಮು ಲಕ್ಷಣಗಳಿರುವ ಕುರಿತು ವಿಚಾರಿಸಿದ್ದಾರೆ. ಪುರಸಭೆ ಸಿಬ್ಬಂದಿ ಸ್ವಚ್ಛತೆ ಕೆಲಸ ನಿರ್ವಹಿಸಿದ್ದರು. ಸದರಿ ಬಡಾವಣೆಯಲ್ಲಿನ ಜನರಲ್ಲಿ ಭಯ ಹೋಗದೇ, ಮನೆಯ ಬಾಗಿಲು ಹಾಕಿಕೊಂಡು ಸ್ವಯಂ ನಿರ್ಬಂಧ ಹಾಕಿಕೊಂಡಿರುವ ದೃಶ್ಯ ಕಂಡು ಬಂದಿದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಿಂದ ಕುಷ್ಟಗಿ ಪಟ್ಟಣಕ್ಕೆ ಆಗಮಿಸುವವರ ಸಂಖ್ಯೆ ತಗ್ಗಿದೆ. ಸಂಚರಿಸುವಾಗ ಸ್ವಯಂ ಪ್ರೇರಿತರಾಗಿ ಮಾಸ್ಕ್ ಧರಿಸಿರುವುದು ಕಂಡು ಬಂತು.