ಕೊಪ್ಪಳ: ಜಿಲ್ಲೆಯಲ್ಲಿ ಇಂದು ಒಟ್ಟು 8 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಕೊಪ್ಪಳ ಜಿಲ್ಲಾಡಳಿತ, ಜಿಲ್ಲೆಯಲ್ಲಿ ಹೊಸದಾಗಿ ಐವರು ಪುರುಷರು ಹಾಗೂ ಮೂವರು ಮಹಿಳೆಯರು ಸೇರಿ ಒಟ್ಟು 8 ಜನರಿಗೆ ಸೋಂಕು ತಗುಲಿರೋದು ದೃಢಫಟ್ಟಿದೆ ಎಂದು ತಿಳಿಸಿದೆ.
ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 41ಕ್ಕೆ ಏರಿದಂತಾಗಿದೆ. ಜಿಲ್ಲೆಯ ಕುಕನೂರು (ಯಲಬುರ್ಗಾ) ತಾಲೂಕಿನ ತಳಕಲ್ ಗ್ರಾಮದ 29 ವರ್ಷದ ಪುರುಷ ಹಾಗೂ 21 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಇವರು ಆಂಧ್ರಪ್ರದೇಶದ ಗದ್ವಾಲದಿಂದ ಜೂನ್ 18ರಂದು ತಳಕಲ್ಗೆ ಬಂದಿದ್ದರು.
ಸೋಂಕಿನ ಲಕ್ಷಣಗಳು ಇಲ್ಲದಿದ್ದರೂ ಪಾಸಿಟಿವ್ ಬಂದಿದೆ. ಇನ್ನು ಕುಷ್ಟಗಿ ತಾಲೂಕಿನ ಪುರ ಗ್ರಾಮದ 40 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಈ ಮಹಿಳೆಗೆ ಸೋಂಕು ತಗುಲಿದ್ದು ಆತಂಕಕ್ಕೆ ಕಾರಣವಾಗಿದೆ. ಇನ್ನು ಕುಷ್ಟಗಿ ಪಟ್ಟಣದ 20 ವರ್ಷದ ಯುವಕನಿಗೆ ಸೋಂಕು ತಗುಲಿದೆ. ಬಾಗಲಕೋಟೆ ಜಿಲ್ಲೆಯ ಟ್ರಾವೆಲ್ ಹಿಸ್ಟರಿ ಈತನಿಗೆ ಇದೆ.
ಇನ್ನು ಗಂಗಾವತಿ ತಾಲೂಕಿನ ಶ್ರೀರಾಮನಗರದ 25 ವರ್ಷದ ಮಹಿಳೆಗೆ ಸೋಂಕು ತಗುಲಿರೋದು ದೃಢಪಟ್ಟಿದೆ. P-7451 ಪ್ರಾಥಮಿಕ ಸಂಪರ್ಕಿತೆ ಎಂದು ಗುರುತಿಸಲಾಗಿದೆ.
ಕತಾರಾದಿಂದ ಬಂದು ಜೂನ್ 18 ರಿಂದ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದ ಗಂಗಾವತಿಯ ಶ್ರೀರಾಮನಗರದ 33 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಟ್ರಾವೆಲ್ ಹಿಸ್ಟರಿ ಇಲ್ಲದ ಗಂಗಾವತಿ ನಗರದ 42 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮದ 29 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ.
ಈ ವ್ಯಕ್ತಿ ಓರಿಸ್ಸಾದಿಂದ ಬಂದು ಜೂನ್ 19 ರಂದು ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದರು. ಇಂದು ತಡವಾಗಿ ಎಂಟು ಪ್ರಕರಣಗಳು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ ಈವರೆಗೆ ಒಟ್ಟು 41ಕ್ಕೆ ಏರಿದಂತಾಗಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿರೋದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸುತ್ತಿದೆ.