ಕೊಪ್ಪಳ: ಜಿಲ್ಲೆಯಲ್ಲಿ ನಿನ್ನೆ 520 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 7 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.
ಕೊಪ್ಪಳ ತಾಲೂಕಿನಲ್ಲಿ 166, ಗಂಗಾವತಿ ತಾಲೂಕಿನಲ್ಲಿ 229, ಕುಷ್ಟಗಿ ತಾಲೂಕಿನಲ್ಲಿ 57 ಹಾಗೂ ಯಲಬುರ್ಗಾ ತಾಲೂಕಿನ 68 ಪ್ರಕರಣ ಸೇರಿ ಒಟ್ಟು 520 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈವರೆಗೆ ಒಟ್ಟು 22767 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ನಿನ್ನೆ 7 ಜನ ಸೋಂಕಿತರು ಸಾವನ್ನಪ್ಪಿದ್ದು, ಈವರೆಗೆ ಒಟ್ಟು 372 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. 213 ಜನರು ಗುಣಮುಖರಾಗಿದ್ದು, ಈವರೆಗೆ ಒಟ್ಟು 17025 ಜನರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 5370 ಸಕ್ರಿಯ ಪ್ರಕರಣಗಳಿದ್ದು, 4849 ಜನ ಸೋಂಕಿತರು ಹೋಂ ಐಸೋಲೇಷನ್ನ್ನಲ್ಲಿದ್ದಾರೆ. 521 ಜನ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
273 ವಾಹನಗಳು ಜಪ್ತಿ...
ಕೊರೊನಾ ಸೋಂಕು ತಡೆಗಟ್ಟಲು ಲಾಕ್‌ಡೌನ್ ಜಾರಿಯಾಗಿದ್ದು, ನಿಯಮಗಳ ಉಲ್ಲಂಘನೆ ಮಾಡಿ ರಸ್ತೆಗಳಿದ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಹಲವು ಪ್ರಕರಣಗಳಿಗೆ ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ತಿಳಿಸಿದ್ದಾರೆ. ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿ ರಸ್ತೆಗಳಿದ 273 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಮೋಟಾರು ವಾಹನ ಕಾಯ್ದೆಯಡಿ 630 ಪ್ರಕರಣಗಳಲ್ಲಿ 61,400 ರೂಪಾಯಿ ದಂಡ ವಿಧಿಸಲಾಗಿದೆ. ಇನ್ನು ಕರ್ನಾಟಕ ಎಪಿಡೆಮಿಕ್ ಡಿಸೀಸ್ ಆ್ಯಕ್ಟ್ 2020ರ ಅಡಿಯಲ್ಲಿ ಒಂದು ಪ್ರಕರಣ ಹಾಗೂ ಮಾಸ್ಕ್ ಹಾಗೂ ಸಾಮಾಜಿಕ ಅಂತರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 422 ಪ್ರಕರಣಗಳಿಂದ 42200 ರೂಪಾಯಿ ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಸಿಕೆ ಪ್ರಾರಂಭ...
ಮೊನ್ನೆಯಿಂದ 18ರಿಂದ 44 ವರ್ಷದವರಿಗೆ ಎಲ್ಲರಿಗೂ ಕೋವಿಡ್ ಲಸಿಕೆ ನೀಡಿಕೆ ಪ್ರಾರಂಭವಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಲಿಂಗರಾಜು ಅವರು ಜಿಲ್ಲಾಸ್ಪತ್ರೆಯಲ್ಲಿ ಚಾಲನೆ ನೀಡಿದರು. ಒಂದು ವಾರದವರೆಗೆ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ವ್ಯಾಕ್ಸಿನ್ ಹಾಕಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ಡಿವೈಎಸ್ಪಿ ಸಿಟಿ ರೌಂಡ್...
ಕೊರೊನಾ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ಲಾಕ್ಡೌನ್ ಜಾರಿಯಾಗಿದ್ದು, ನಗರದಲ್ಲಿನ ಸ್ಥಿತಿಗತಿ ಅವಲೋಕಿಸಲು ಡಿವೈಎಸ್ಪಿ ಗೀತಾ ಅವರು ಸಿಟಿ ರೌಂಡ್ಸ್ ಹಾಕಿದರು. ಲಾಕ್ಡೌನ್ ಜಾರಿಯಾಗಿದ್ದರೂ ಜನರು ಹಾಗೂ ವಾಹನ ಸವಾರರು ಕ್ಯಾರೇ ಎನ್ನದೆ ಓಡಾಡುತ್ತಿದ್ದರು. ಈ ನಡುವೆ ಕೊಪ್ಪಳ ಡಿವೈಎಸ್ಪಿ ಗೀತಾ ಅವರು ತಮ್ಮ ವಾಹನದಲ್ಲಿ ಕುಳಿತುಕೊಂಡೇ ಸಿಟಿ ರೌಂಡ್ಸ್ ಹಾಕಿದರು.
8 ಕಡೆ ಚೆಕ್ ಪೋಸ್ಟ್...
ಅಂತರ್ ಜಿಲ್ಲೆ ಸಂಚಾರಕ್ಕೆ ನಿರ್ಬಂಧ ಇರುವುದರಿಂದ ಗಡಿ ಹಂಚಿಕೊಂಡಿರುವ ಎಂಟು ಕಡೆ ಚೆಕ್ ಪೋಸ್ಟ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ತಿಳಿಸಿದ್ದಾರೆ.