ಗಂಗಾವತಿ : ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಗಂಗಾವತಿ ನಗರ ವೇಗವಾಗಿ ಬೆಳೆಯುತ್ತಿದೆ. ನಗರದಲ್ಲಿ ಒಂದು ದಿನಕ್ಕೆ 45 ಟನ್ ಕಸ ಉತ್ಪತ್ತಿಯಾಗುತ್ತಿದೆ ಎಂದು ಪೌರಾಯುಕ್ತ ಅರವಿಂದ್ ಜಮಖಂಡಿ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ನಗರದ ಸ್ವಚ್ಛತೆಗೆ ಇಷ್ಟು ದೊಡ್ಡ ಪ್ರಮಾಣದ ನಾಗರಿಕ ಸೇವೆ ನೀಡುವುದು ಸ್ಥಳೀಯ ಸಂಸ್ಥೆಗಳಿಗೆ ನಿಜಕ್ಕೂ ಸವಾಲಿನ ಕೆಲಸ. ನಗರದಲ್ಲಿನ ಒಳಭಾಗ, ಸಂಪರ್ಕ ಕಲ್ಪಿಸುವ ಪ್ರಮುಖ ಹಾಗೂ ಉಪ ರಸ್ತೆಗಳ ಅಳತೆಯೇ 248 ಕಿ.ಮೀ ಇದೆ. ಜೊತೆಗೆ ಮನೆಗಳ ಎಡಬಲ, ಮುಖ್ಯರಸ್ತೆಗಳ ಪಕ್ಕದಲ್ಲಿರುವ ಎಲ್ಲಾ ಚರಂಡಿಗಳ ಉದ್ದ 600 ಕಿ.ಮೀ ಇದೆ.
ನಗರದಲ್ಲಿ ಒಟ್ಟು 25,350.4 ಮನೆಗಳಿವೆ. ಒಂದು ದಿನಕ್ಕೆ ನಗರದಲ್ಲಿ 45 ಟನ್ ಕಸ ಉತ್ಪತ್ತಿಯಾಗುತ್ತಿದೆ. ಇದನ್ನು ವಿಲೇವಾರಿ ಮಾಡುವುದು ಸವಾಲಿನ ಕೆಲಸ. ಇಡೀ ನಗರದ ಸ್ವಚ್ಛತೆಗೆ ಮೂಲ ಬುನಾದಿಯೇ ಪೌರ ಕಾರ್ಮಿಕರು. ಅವರಿಗೆ ಗೌರವ ಕೊಡುವ ಜೊತೆಗೆ ಕನಿಷ್ಟ ಸೌಲಭ್ಯ ಒದಗಿಸಲು ಮೊದಲ ಆದ್ಯತೆ ನೀಡಬೇಕು ಎಂದರು.