ಕೊಪ್ಪಳ: ತ್ರಿವಿಧ ದಾಸೋಹಕ್ಕೆ ಸಾಕ್ಷಿಯಾಗಿರುವ ಕೊಪ್ಪಳ ಗವಿಮಠದ ಜಾತ್ರೆಯಲ್ಲಿ ಸತತ 15 ದಿನಗಳ ಕಾಲ ಮಹಾದಾಸೋಹ ಜರುಗುತ್ತದೆ. ಇಂದಿನ ದಾಸೋಹದಲ್ಲಿ ಕೊಪ್ಪಳದ ಸಮಾನ ಮನಸ್ಕರ ಗೆಳೆಯರು ಸೇರಿಕೊಂಡು ಮಿರ್ಚಿ ವಿತರಣೆ ಮಾಡಿರುತ್ತಿರುವುದು ವಿಶೇಷವಾಗಿದೆ. ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯಿಂದ ಸುಮಾರು ನಾಲ್ಕು ಲಕ್ಷ ಮಿರ್ಚಿ ತಯಾರಿಸಲಾಗುತ್ತಿದೆ. ಇದಕ್ಕಾಗಿ ಸುಮಾರು 6 ಲಕ್ಷ ರೂ. ಹಣವನ್ನು ತಾವೇ ಹಾಕಿಕೊಂಡಿದ್ದಾರೆ.
25 ಕ್ವಿಂಟಲ್ ಹಸಿ ಕಡಲೆಬೇಳೆ ಹಿಟ್ಟು, 15 ಕ್ವಿಂಟಲ್ ಹಸಿ ಮೆಣಸಿನಕಾಯಿ, 9 ಬ್ಯಾರಲ್ ಅಡುಗೆ ಎಣ್ಣೆ, 1 ಕ್ವಿಂಟಲ್ ಉಪ್ಪು, 50 ಕೆ.ಜಿ. ಅಜವಾನ, 50 ಕೆ.ಜಿ.ಸೋಡಾ ಪುಡಿ, 40 ಸಿಲಿಂಡರ್, 15 ಕಡಾಯಿಗಳಲ್ಲಿ 200 ಜನ ಬಾಣಸಿಗರು, 200 ಸ್ವಯಂ ಸೇವಕರು, 50 ಜನರ ಉಸ್ತುವಾರಿಯಲ್ಲಿ ಮಿರ್ಚಿಗಳು ತಯಾರಾಗುತ್ತಿವೆ. ಪ್ರತಿ ನಾಲ್ಕು ತಾಸು ಒಂದು ತಂಡ ನಿರಂತರವಾಗಿ ಕೆಲಸ ಮಾಡಲಿದೆ.
ಭಕ್ತರಿಗೆ ವಿವಿಧ ಖಾದ್ಯಗಳು : ಮಹಾದಾಸೋಹದಲ್ಲಿ ಹಲವು ಬಗೆಯ ಖಾದ್ಯಗಳನ್ನು ಊಟಕ್ಕೆ ಬಡಿಸಲಾಗುತ್ತಿದೆ. ಈಗ 20 ಲಕ್ಷ ರೊಟ್ಟಿ, 6 ಲಕ್ಷ ಶೇಂಗಾ ಹೋಳಿಗೆ, 400 ಕ್ವಿಂಟಲ್ ಮಾದಲಿ, 10 ಕ್ವಿಂಟಲ್ ತುಪ್ಪ ಹೀಗೆ ಬಗೆಬಗೆಯ ಅಡುಗೆ ತಯಾರಿಸಿ ಮಠಕ್ಕೆ ಬರುವ ಭಕ್ತರಿಗೆ ನೀಡಲಾಗುತ್ತಿದೆ. ಇವುಗಳ ಮಧ್ಯೆ ದಾಸೋಹದಲ್ಲಿ ಮಿರ್ಚಿ ಸಹ ಸೇರಿಕೊಂಡಿದೆ.
ಇದನ್ನೂ ಓದಿ: ಕೊಪ್ಪಳ ಗವಿಸಿದ್ದೇಶ್ವರ ಮಹಾ ರಥೋತ್ಸವ.. ಗವಿಸಿದ್ದೇಶ ಬದುಕಿದ್ದಾರೆ ಎನ್ನುವುದಕ್ಕೆ ಸೇರಿರುವ ಜನರೇ ಸಾಕ್ಷಿ:ಸದ್ಗುರು
ದಕ್ಷಿಣ ಭಾರತದ ಕುಂಭಮೇಳ: ದೇಶದಲ್ಲಿ ಅತಿ ಹೆಚ್ಚು ಜನರು ಒಂದೆಡೆ ಸೇರುವ ಧಾರ್ಮಿಕ ಸಮಾರಂಭಗಳಲ್ಲಿ ಮೊದಲ ಸ್ಥಾನ ಕುಂಭಮೇಳಕ್ಕಿದೆ. ಆದರೆ, ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ, ಮಠದ ಮುಂದಿನ ಬೃಹತ್ ಬಯಲಿನಲ್ಲಿ ನಡೆಯುವುದರಿಂದ, ಅತಿ ಹೆಚ್ಚು ಜನರನ್ನು ಒಂದೆಡೆ ಕಾಣುವ ಕಾರಣಕ್ಕಾಗಿ ದಕ್ಷಿಣ ಭಾರತದ ಕುಂಭಮೇಳ ಎಂದು ಇದು ಹೆಸರುವಾಸಿಯಾಗಿದೆ. ಈ ಬಾರಿಯ ರಥೋತ್ಸವಕ್ಕೆ ಈಶಾ ಫೌಂಡೇಶನ್ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಚಾಲನೆ ನೀಡಿದ್ದಾರೆ.
ಜ್ಞಾನದಾಸೋಹ: ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಅನ್ನದಾಸೋಹ ಅಷ್ಟೇ ಅಲ್ಲದೆ ಇಲ್ಲಿ ಜ್ಞಾನ ದಾಸೋಹವೂ ಜರುಗುತ್ತದೆ. ಜಾತ್ರೆಯ ದಿನದಿಂದ ಮೂರು ದಿನಗಳ ಕಾಲ ಕಲ್ಲುಬೆಟ್ಟದ ಮೇಲಿರುವ ಕೈಲಾಸ ಮಂಪಟದಲ್ಲಿ ನಡೆಯುವ ಚಿಂತನ ಕಾರ್ಯಕ್ರಮಗಳು ಜಾತ್ರೆಯ ನಿಜವಾದ ಆಕರ್ಷಣೆ. ಆಗ ಇಡೀ ಕಲ್ಲುಬೆಟ್ಟವೇ ಜನಾವೃತವಾಗಿರುತ್ತದೆ. ನಾಡಿನ ಹಲವು ಗಣ್ಯರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಆಹ್ವಾನಿಸಿ ಅವರ ಮನದಾಳದ ಮಾತುಗಳನ್ನು ಹಂಚಿಕೊಳ್ಳಲು ಮುಕ್ತ ಅವಕಾಶ ನೀಡಲಾಗುತ್ತದೆ.
ಇದನ್ನೂ ಓದಿ: ಡ್ರೋಣ ಕ್ಯಾಮರಾದಲ್ಲಿ ಗವಿಸಿದ್ದೇಶ್ವರ ಜಾತ್ರೆ ವೈಭವ ನೋಡಿ..