ಗಂಗಾವತಿ (ಕೊಪ್ಪಳ): ಎಂಟು ವರ್ಷದ ಬಾಲಕಿಯ ಮೇಲೆ 30 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಅಬ್ದುಲ್ ರಜಾಕ್ ಎಂದು ಗುರುತಿಸಲಾಗಿದೆ.
ಬಾಲಕಿಯ ತಂದೆ-ತಾಯಿ ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಆಕೆಗೆ ಬ್ಯಾಟ್, ಬಾಲ್ ಕೊಡುವುದಾಗಿ ಹೇಳಿ ಪುಸಲಾಯಿಸಿ, ತನ್ನ ಮನೆಯೊಳಗೆ ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆಗೆ ಯತ್ನಿಸಿದ್ದಾನೆ. ತಾಯಿ ಮನೆಗೆ ಬಂದಾಗ ಬಾಲಕಿಯು ನಡೆದ ಘಟನೆಯನ್ನು ವಿವರಿಸಿದ್ದಾಳೆ. ಕೂಡಲೇ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಆತ ಸಿಗದ ಹಿನ್ನೆಲೆ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ, ತ್ರಿವಳಿ ಕೊಲೆ, ದರೋಡೆ ಪ್ರಕರಣ: ಮೂವರಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ಪ್ರತ್ಯೇಕ ಘಟನೆ: ಗಂಗಾವತಿಯಲ್ಲಿ ಪ್ರತ್ಯೇಕ ಘಟನೆಯೊಂದು ವರದಿಯಾಗಿದೆ. ನಗರದ ಮನೆಗಳನ್ನು ಗುರಿಯಾಗಿಸಿಕೊಂಡು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕಾರಟಗಿಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 2.5 ಲಕ್ಷ ರೂಪಾಯಿ ಮೌಲ್ಯದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ಬೂದಗುಂಪಾ ಗ್ರಾಮದ ಯರಡೋಣಿ ರಸ್ತೆಯ ಪೀರಸಾಬ ಅಲಿಯಾಸ ತೋಡರ ಹಿರೇಮನಿ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಅಪ್ರಾಪ್ತ ವಯಸ್ಕನಾಗಿದ್ದು, ಪೊಲೀಸರು ಹೆಸರು ಬಹಿರಂಗಪಡಿಸಿಲ್ಲ. ಬಂಧಿತರಿಂದ 2.5 ಲಕ್ಷ ಮೌಲ್ಯದ ಬಂಗಾರದ ಒಡವೆಯ ಜೊತೆಗೆ ಕಳ್ಳತನಕ್ಕೆ ಬಳಸಿಕೊಳ್ಳುತ್ತಿದ್ದ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬೂದಗುಂಪಾ ಗ್ರಾಮದಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ತನಿಖೆ ನಡೆಸುವಾಗ ಈ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಜೂಜಾಟದ ಮೇಲೆ ದಾಳಿ: ಗಂಗಾವತಿ ನಗರದ ಪೌರಾಣಿಕ ಹಿನ್ನೆಲೆ ಹೊಂದಿರುವ ದೇವಘಾಟದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದರ ಬಗ್ಗೆ ಖಚಿತ ಮಾಹಿತಿ ಮೆರೆಗೆ ದಾಳಿ ಮಾಡಿದ ಗ್ರಾಮೀಣ ಪೊಲೀಸರು, ಐವರನ್ನು ಬಂಧಿಸಿದ್ದಾರೆ. ಅವರಿಂದ 12,800 ಮೊತ್ತದ ನಗದು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಇಲಾಹಿ ಕಾಲೋನಿಯ ಕೆ ಮಹೆಬೂಬಸಾಬ ಕೊಲ್ಲಾಗ್ವಾಟಿ, ಇಸ್ಲಾಂಪುರದ ಮಹಮ್ಮದ್ ಗೌಸ್, ಅಜೀಜ್ ಮೇಸ್ತ್ರಿ, ಅಖ್ತರ್ ಅಹ್ಮದ್ ಮತ್ತು ಮುಜಾವರ್ ಕ್ಯಾಂಪಿನ ಖಾಸೀಂಸಾಬ ಟೈಲರ್ ಎಂದು ಗುರುತಿಸಲಾಗಿದೆ.
ಶ್ರೀಗಂಧ ಮರಗಳ್ಳರ ಬಂಧನ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಶ್ರೀಗಂಧ ಮರ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ ತಂಡ ರಚಿಸಿಕೊಂಡು ಕಾರ್ಯಾಚರಣೆಗಿಳಿದಿದ್ದ ಜಿಲ್ಲಾ ಪೊಲೀಸರು ಖದೀಮರನ್ನು ನಿನ್ನೆಯಷ್ಟೇ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಇಸ್ಮಾಯಿಲ್ (40), ಜಬೀವುಲ್ಲಾ, (45), ಹೈದರ್ ಖಾನ್ (30) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 6.50 ಲಕ್ಷ ಮೌಲ್ಯದ ಶ್ರೀಗಂಧವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Davanagere crime: ವೈದ್ಯರ ಮನೆಗೆ ಕನ್ನ; ₹22 ಲಕ್ಷ ನಗದು, ಚಿನ್ನಾಭರಣ ಕಳ್ಳತನ