ಕೊಪ್ಪಳ: ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಲ್ಲಿ ಪತ್ತೆಯಾದ ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ ಮೂರು ವರ್ಷದ ಕಂದಮ್ಮನಿಗೆ ಕೊರೊನಾ ಸೋಂಕು ತಗುಲಿದ್ದು, ತಾಯಿಯ ಸ್ಥಿತಿ ಸಂದಿಗ್ಧವಾಗಿದೆ. ಇನ್ನೊಂದು ಪ್ರಕರಣದಲ್ಲಿ ಸೋಂಕು ತಾಯಿಗೆ ತಗುಲಿ ಸುಮಾರು 10 ತಿಂಗಳ ಮಗುವಿನ ಸ್ಥಿತಿ ಮನಕಲುಕುವಂತೆ ಮಾಡಿದೆ.
ಸೋಂಕು ತಗುಲಿರುವ ಮಗುವಿಗೆ ತಾಯಿ ಸುರಕ್ಷತೆಯ ಸಾಧನಗಳೊಂದಿಗೆ ತನ್ನ ಮಗುವಿನೊಂದಿಗೆ ಇರಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಮಗು ಕೇವಲ ಮೂರು ವರ್ಷ ಆಗಿರುವುದರಿಂದ ತಾಯಿಯನ್ನು ಬಿಟ್ಟು ಇರುವುದಿಲ್ಲ. ಮಗುವಿಗೆ ಊಟ ಮಾಡಿಸಲು, ಅದರ ನಿತ್ಯಕರ್ಮಗಳನ್ನು ಪೂರೈಸಲು ತಾಯಿಯ ಅಗತ್ಯತೆ ಇದೆ. ಹೀಗಾಗಿ ತಾಯಿ ತನ್ನ ಮಗುವಿನೊಂದಿಗೆ ಕೊಪ್ಪಳದ ಕೋವಿಡ್-19 ಆಸ್ಪತ್ರೆಯಲ್ಲಿದ್ದಾಳೆ. ಮಗುವಿನ ಬಳಿ ಇರುವುದರಿಂದ ಎನ್ 95 ಮಾಸ್ಕ್ ಹಾಗೂ ಇನ್ನಿತರೆ ಸುರಕ್ಷಿತ ಸಲಕರಣೆಗಳನ್ನು ಬಳಸುತ್ತಿದ್ದಾರೆ. ಆದರೆ, ಮಗುವನ್ನು ಒಂಟಿಯಾಗಿ ಆಸ್ಪತ್ರೆಯಲ್ಲಿ ಬಿಟ್ಟರೆ ಮಗು ಇನ್ನಷ್ಟು ಮಾನಸಿಕವಾಗಿ ಕುಗ್ಗುತ್ತದೆ ಎಂಬ ಕಾರಣಕ್ಕೆ ಕೊರೊನಾ ಸೋಂಕಿನ ಭೀತಿಯ ನಡುವೆ ತಾಯಿಯೂ ಇರಬೇಕಾದ ಅನಿವಾರ್ಯತೆ ಇದೆ.
ಇದು ಒಂದು ಕಡೆಯಾದರೆ ಮತ್ತೊಂದು ಪ್ರಕರಣ ಇದಕ್ಕೆ ತದ್ವಿರುದ್ಧ. ಜೂನ್ 16 ರಂದು ಪತ್ತೆಯಾದ ಕೊರೊನಾ ಸೋಂಕಿತ ಮಹಿಳೆಗೆ ಕೇವಲ 10 ತಿಂಗಳ ಹಸುಗೂಸು ಇದೆ. ಈ ಹಸುಗೂಸಿಗೆ ತಾಯಿಯ ಅಗತ್ಯತೆ ತುಂಬಾ ಇರುತ್ತದೆ. ಮಗುವಿಗೆ ಹಾಲುಣಿಸುವುದು ಎಲ್ಲಾ ಅಗತ್ಯಗಳಲ್ಲಿ ಒಂದು. ಸೋಂಕು ತಗುಲಿರುವುದರಿಂದ ತನ್ನ ಹಸುಗೂಸನ್ನು ಬಿಟ್ಟು ಇರಬೇಕಾಗಿರುವುದು ಆ ತಾಯಿಗೆ ಅನಿವಾರ್ಯವಾಗಿದೆ. ಈ ಸನ್ನಿವೇಶ ನೋಡಿದರೆ ಹೃದಯ ಕಿತ್ತು ಬರುವಂತಿದೆ.
ತಜ್ಞರ ಅಭಿಪ್ರಾಯದ ಮೇರೆಗೆ ಈಗ ಆ ತಾಯಿ ತನ್ನ ಮಗುವಿಗೆ ಸುರಕ್ಷತೆಯ ಸಲಕರಣೆಗಳನ್ನು ಬಳಸಿಕೊಂಡು ಹಾಲುಣಿಸಬಹುದಂತೆ. ಹೀಗಾಗಿ, ಮಗುವಿಗೆ ಹಾಲುಣಿಸಲು ಸೋಂಕಿತ ಮಹಿಳೆಯ ಕುಟುಂಬಸ್ಥರು ಆಗಾಗ ಕರೆದುಕೊಂಡು ಬರುತ್ತಾರಂತೆ. ಮಗುವಿನ ಹಿತದೃಷ್ಠಿಯಿಂದ ಈ ಸೋಂಕಿತ ತಾಯಿಯನ್ನು ಹಿರಿಯ ಅಧಿಕಾರಿಗಳ ಸೂಚನೆ ಹಾಗೂ ಒಪ್ಪಿಗೆ ಮೇರೆಗೆ ಗಂಗಾವತಿಯಲ್ಲಿನ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಅದೇನೆ ಇರಲಿ, ಈ ಎರಡು ಕೊರೊನಾ ಪ್ರಕರಣಗಳ ಸನ್ನಿವೇಶ ಮಾತ್ರ ಹೃದಯ ಕಲಕುವಂತೆ ಮಾಡುತ್ತಿದೆ.