ಕೊಪ್ಪಳ: ರಾಜ್ಯದಲ್ಲಿ ಮೂರೂ ಪಕ್ಷಗಳ ಸಮ್ಮಿಶ್ರ ಸರ್ಕಾರವಿದೆ ಎಂದು ಮಾಜಿ ಸಚಿವ, ಜೆಡಿಎಸ್ ಹಿರಿಯ ನಾಯಕ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಸಿಬಿ ಸರ್ಕಾರವಿದೆ. ಜೆಸಿಬಿ ಅಂದ್ರೆ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ. ಜೆಡಿಎಸ್ ಹಾಗೂ ಕಾಂಗ್ರೆಸ್ನ ಕೆಲವರು ಅಲ್ಲಿ ಹೋಗಿ ಮಂತ್ರಿಗಳಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಈಗ ಇರೋದು ಮೂರು ಪಕ್ಷಗಳ ಸಮ್ಮಿಶ್ರ ಸರ್ಕಾರ. ಜೆಡಿಎಸ್ ಹಾಗೂ ಕಾಂಗ್ರೆಸ್ನಿಂದ ಹೋಗಿ ಮಂತ್ರಿಯಾಗಿರುವವರು ಅಧಿಕಾರ ಹೋದರೆ ವಾಪಸ್ ಬರ್ತಾರೆ ಎಂದರು.
ಇನ್ನು ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾದರೆ ನಮಗೆ ಸಂತೋಷವಿದೆ. ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ಅವರ ಪಕ್ಷದ ಆಂತರಿಕ ವಿಚಾರ. ಆದರೆ, ಯಾವ ಸರ್ಕಾರ ಬಂದರೂ ಸಹ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಲಾಗಿದೆ. ಹೀಗಾಗಿಯೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಏಳುತ್ತದೆ. ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡಬಾರದು. ಉತ್ತರ ಕರ್ನಾಟಕದವರು ಸಿಎಂ ಆದರೆ ಖುಷಿಪಡುತ್ತೇವೆ ಎಂದರು.
ಮೀರ್ ಸಾಧಿಕ್ ಯಾರು ಎಂಬುದರ ಕುರಿತು ಜೆಡಿಎಸ್, ಕಾಂಗ್ರೆಸ್ನವರು ಪರಾಮರ್ಶೆ ಮಾಡಿಕೊಳ್ಳಲಿ ಎಂದು ನಿನ್ನೆ ಕೊಪ್ಪಳದಲ್ಲಿ ಸಿಟಿ ರವಿ ನೀಡಿದ್ದ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಬಸವರಾಜ ಹೊರಟ್ಟಿ ಅವರು, ಬಿಜೆಪಿಯಲ್ಲಿ ಸಾಕಷ್ಟು ಕಚ್ಚಾಟವಿದೆ. ಹೀಗಾಗಿ ಸಿಟಿ ರವಿ ಅದನ್ನು ಮೊದಲು ನೋಡಿಕೊಳ್ಳಲಿ ಎಂದರು.
ಜನತಾ ಪರಿವಾರ ಹಾಗೂ ಜನತಾದಳ ಸರ್ಕಾರದ ಸಂದರ್ಭದಲ್ಲಿ ಶಿಕ್ಷಕರಿಗೆ ನಾವು ಸಾಕಷ್ಟು ಕೆಲಸ ಮಾಡಿದ್ದೇವೆ. ಹೀಗಾಗಿ ಈ ಬಾರಿಯ ಶಿಕ್ಷಕರ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ನಾನು ಶಿಕ್ಷಕರಲ್ಲಿ ಮನವಿ ಮಾಡುತ್ತೇನೆ. ಹೋರಾಟದ ಮೂಲಕ ಬೆಳೆದು ಬಂದಿರುವ ವ್ಯಕ್ತಿ ಎಂಬ ಕಾರಣಕ್ಕೆ ಯಡಿಯೂರಪ್ಪ ಅವರ ಬಗ್ಗೆ ನನ್ನದು ಮೃದು ಧೋರಣೆ ಇದೆ ಎಂದರು.