ಕೊಪ್ಪಳ: ಕೋವಿಡ್ ಎರಡನೇ ಅಲೆ ಹೊಡೆತ ಅನೇಕ ಆರ್ಥಿಕ ಚಟುವಟಿಕೆಗಳು ಸೇರಿದಂತೆ ಜನಜೀವನದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಅದರಲ್ಲೂ ಮಣ್ಣಿನ ಮಡಕೆ, ಗಡಿಗೆಗಳನ್ನು ತಯಾರಿಸುವ ಕುಂಬಾರರ ಬದುಕು ಅಡಕತ್ತರಿಯಲ್ಲಿದೆ. ಈಗಾಗಲೇ ತಯಾರಿಸಿದ ಮಡಿಕೆಗಳನ್ನು ಮಾರಾಟಕ್ಕಿಟ್ಟರೂ ವ್ಯಾಪಾರವಾಗದೆ ಮನೆಗೆ ಮರಳುವಂತಾಗಿದೆ.
ಕಳೆದ ವರ್ಷ ಮಾಡಿದ ಮಡಿಕೆ, ಗಡಿಗೆಗಳು ವ್ಯಾಪಾರವಾಗದೇ ಮೂಲೆ ಸೇರಿಕೊಂಡಿವೆ. ಬಡವರ ಫ್ರಿಡ್ಜ್ ಎಂದೇ ಕರೆಯಲ್ಪಡುವ ಮಣ್ಣಿನ ಮಡಿಕೆಗಳ ವ್ಯಾಪಾರ ಬೇಸಿಗೆ ಸಂದರ್ಭದಲ್ಲಿ ಉತ್ತಮವಾಗಿರುತ್ತಿತ್ತು. ಆದರೆ ಕಳೆದ ಬಾರಿಯೂ ಈ ಸಂದರ್ಭದಲ್ಲಿಯೇ ಕೊರೊನಾ ಸೋಂಕಿನ ಭೀತಿಯಿಂದ ಲಾಕ್ಡೌನ್ ಮಾಡಲಾಯಿತು. ಪರಿಣಾಮ, ಕಳೆದ ವರ್ಷ ತಯಾರು ಮಾಡಿದ್ದ ಸ್ಥಳೀಯ ಕುಂಬಾರಿಕೆಯ ಮಣ್ಣಿನ ಗಡಿಗೆ, ಮಡಿಕೆಗಳು ಇನ್ನೂ ಹಾಗೆಯೇ ಉಳಿದುಕೊಂಡಿವೆ ಎನ್ನುತ್ತಾರೆ ಸ್ಥಳೀಯ ಕುಂಬಾರರು.
ಕೊರೊನಾ ಕಾರಣದಿಂದ ಗಡಿಗೆಗಳನ್ನು ಕೊಂಡುಕೊಳ್ಳುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ತಂಪಾದ ನೀರು ಕುಡಿದರೆ ಶೀತ, ನೆಗಡಿಯಾಗುತ್ತದೆ ಎಂದು ಜನರು ಮಣ್ಣಿನ ಗಡಿಗೆಗಳನ್ನು ಖರೀದಿಸುತ್ತಿಲ್ಲ.
ಇದನ್ನೂ ಓದಿ: ರಾಜ್ಯದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಸೂಕ್ತ ಬೆಡ್ ವ್ಯವಸ್ಥೆ ಇದೆಯೇ?
ಬೆಳಗ್ಗೆ 10 ಗಂಟೆಯವರೆಗೆ ನಿಂತರೂ ಒಬ್ಬಿಬ್ಬರು ಮಡಿಕೆ, ಗಡಿಗೆಗಳನ್ನು ಕೊಂಡುಕೊಳ್ಳಲು ಬರುತ್ತಾರೆ. ಇದನ್ನು ಹೊರತುಪಡಿಸಿ ಮೊದಲಿದ್ದ ವ್ಯಾಪಾರವಿಲ್ಲ. ಕೆಲವೊಮ್ಮೆ ಯಾರೂ ಬರುವುದಿಲ್ಲ. ಹೀಗಾಗಿ ಕಳೆದ ವರ್ಷದಿಂದ ಕುಂಬಾರರ ಬದುಕು ದುಸ್ತರವಾಗಿದೆ. ವ್ಯಾಪಾರವಾದ ಒಂದೆರಡು ಮಡಿಕೆ, ಗಡಿಗೆಗಳಿಂದ ಬಂದ ಹಣದಿಂದ ಈಗ ಜೀವನ ನಡೆಸಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕುಂಬಾರರು.