ಗಂಗಾವತಿ(ಕೊಪ್ಪಳ): ಬೇಸಿಗೆಯಲ್ಲೇ ಅಬ್ಬರಿಸುತ್ತಿರುವ ಮಳೆಗೆ ರಾಜ್ಯದ ಕೆಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಕಳೆದ ಎರಡ್ಮೂರು ದಿನಗಳಿಂದ ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಮಣ್ಣಿನ ಮನೆ ಕುಸಿದು ವೃದ್ಧೆ ಹಾಗೂ 24 ದಿನದ ಹಸುಗೂಸು ಸಾವನ್ನಪ್ಪಿದ್ದ ಹೃದಯ ವಿದ್ರಾವಕ ಘಟನೆ ಕನಕಗಿರಿ ತಾಲೂಕಿನ ಜೀರಾಳ ಗ್ರಾಮದಲ್ಲಿ ನಡೆದಿದೆ. ಮೃತ ವೃದ್ಧೆಯನ್ನು ಫಕೀರಮ್ಮ ತಿಮ್ಮಣ್ಣ ಭೋವಿ (60) ಎಂದು ಗುರುತಿಸಲಾಗಿದೆ. ಕನಕಪ್ಪ ಮತ್ತು ಕನಕಮ್ಮ ಎಂಬ ದಂಪತಿಗೆ ಸೇರಿದ 24 ದಿನಗಳ ಹೆಣ್ಣು ಮಗು ಘಟನೆಯಲ್ಲಿ ಅಸುನೀಗಿದೆ.
ವೃದ್ಧೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಸಾವನ್ನಪ್ಪಿದೆ. ಕನಕಪ್ಪ ತಳವಾರ ಮನೆಯ ಹೊರಗೆ ಮಲಗಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಣಂತಿ ಕನಕಮ್ಮ ಅವರಿಗೆ ಕಾಲು ಮರಿದಿದ್ದು ಕನಕಗಿರಿಯ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗೆ ಸುರಿದ ಮಳೆ ಗಾಳಿಯಿಂದಾಗಿ ಮನೆಯ ಮೇಲಿನ ತಗಡುಗಳಿಗೆ ಹಾನಿಯಾಗಿ ಮಳೆ ನೀರು ನಿರಂತರವಾಗಿ ಸೋರುತ್ತಿದ್ದ ಕಾರಣ ಗೋಡೆಗಳು ನೆನೆದು ಕುಸಿತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಘಟನೆ ಸಂಬಂಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬಾಗಲಕೋಟೆ: ಮನೆ ಕುಸಿದು ಇಬ್ಬರು ಮಹಿಳೆಯರು ಸಾವು