ಗಂಗಾವತಿ(ಕೊಪ್ಪಳ): ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ನಡೆದ ಕೋಮು ಘರ್ಷಣೆ ಪ್ರಕರಣದಲ್ಲಿ ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದರು. ಈ ಸಂಬಂಧ ದೂರು, ಪ್ರತಿ ದೂರು ದಾಖಲಾಗಿದ್ದು, ಇದುವರೆಗೆ ಒಟ್ಟು 22 ಜನರನ್ನು ಬಂಧಿಸಲಾಗಿದೆ.
ಘರ್ಷಣೆಯಲ್ಲಿ ಪಾಷಾವಲಿ ಹಾಗೂ ಯಂಕಪ್ಪ ತಳವಾರ ಎಂಬುವರು ಕೊಲೆಗೀಡಾಗಿದ್ದರು. ಪಾಷಾವಲಿ ಕೊಲೆ ಸಂಬಂಧ ಪ್ರಕರಣ ದಾಖಲಾದ 28 ಜನರ ಪೈಕಿ 12 ಜನರು, ಹಾಗೆಯೇ ಯಂಕಪ್ಪ ಹತ್ಯೆ ಪ್ರಕರಣದಲ್ಲಿ ದಾಖಲಾದ ದೂರಿನ ಸಂಬಂಧ 30 ಜನರ ಪೈಕಿ 10 ಜನರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇತರ ಆರೋಪಿಗಳ ಶೋಧಕ್ಕಾಗಿ ಒಟ್ಟು ಐದು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಬಂಧಿತರೆಲ್ಲರನ್ನೂ ಬೇರೆ ಬೇರೆ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಗ್ರಾಮಕ್ಕೆ ನಿರಂತರ ಭೇಟಿ ನೀಡುತ್ತಿರುವ ಕೊಪ್ಪಳ ಜಿಲ್ಲಾ ಎಸ್ಪಿ ಅರಣಂಗ್ಶುಗಿರಿ, ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದಾರೆ. ಅಲ್ಲದೇ ಕರ್ತವ್ಯ ಲೋಪಕ್ಕೆ ಕಾರಣವಾದ ಇಲಾಖೆಯ ಕೆಲ ಅಧಿಕಾರಿಗಳ ಮೇಲೆ ಶಿಸ್ತುಕ್ರಮಕ್ಕೆ ಸೂಚಿಸಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: ಹುಲಿಹೈದರ ಗ್ರಾಮದ ಗುಂಪು ಘರ್ಷಣೆ.. 30 ಜನರ ವಿರುದ್ಧ ಮತ್ತೊಂದು ದೂರು ದಾಖಲು