ಗಂಗಾವತಿ: ಪ್ರಕೃತಿ ವಿಕೋಪಕ್ಕೆ ಸಿಲುಕಿದ ಜನ-ಜಾನುವಾರುಗಳನ್ನು ನಾನಾ ಇಲಾಖೆಯ ರಕ್ಷಣಾ ತಂಡಗಳು ಕಾರ್ಯಚರಣೆ ನಡೆಸಿ ರಕ್ಷಣೆ ಮಾಡುವುದು ವಾಡಿಕೆ. ಆದ್ರೆ, ಪ್ರವಾಹದಿಂದಾಗಿ ನಡುಗಡ್ಡೆಯಲ್ಲಿ ಸಿಲುಕಿದ್ದ 123 ಜಾನುವಾರುಗಳು ಯಾರ ಸಹಾಯವಿಲ್ಲದೇ ನದಿಯಲ್ಲಿ ಈಜಿ ದಡ ಸೇರಿದ ಘಟನೆ ನಗರದಲ್ಲಿ ನಡೆದಿದೆ.
ಗಂಗಾವತಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ದೇವಘಾಟದ ಸಮೀಪವಿರುವ ತುಂಗಭದ್ರಾ ನದಿಯ ಆಚೆ ದಡದಲ್ಲಿದನಗಾಹಿಗಳು ಕುರಿ, ದನ-ಕರುಗಳನ್ನು ಮೇಯಿಸಲು ಹೋಗಿದ್ದರು. ಈ ವೇಳೆ 147 ಕುರಿ ಹಾಗೂ 123 ಜಾನುವಾರುಗಳು ನಡುಗಡ್ಡೆಗೆ ಹೋಗಿದ್ದವು. ಕಳೆದ ಒಂದು ವಾರದಿಂದ ಅಲ್ಲೇ ಇದ್ದವು.
ಆದರೆ, ತುಂಗಭದ್ರಾ ಜಲಾಶಯದಿಂದ ನದಿಗೆ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿಸಿದ ಪರಿಣಾಮ ಜನ ಮತ್ತು ಕುರಿಗಳನ್ನು ಮಾತ್ರ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿ ಕರೆತಂದಿದ್ದಾರೆ. ಮಾಲೀಕರು ದೋಣಿಯಲ್ಲಿ ಹೋಗುತ್ತಿರುವುದನ್ನು ಕಂಡ ಜಾನುವಾರುಗಳು ಯಾವ ರಕ್ಷಣಾ ತಂಡದ ಸಹಾಯವಿಲ್ಲದೆ ಈಜುತ್ತಲೇ ಸುರಕ್ಷಿತವಾಗಿ ಮಂಗಳವಾರ ಸಂಜೆ ದಡ ಸೇರಿವೆ.
ಮನುಷ್ಯ ಎಷ್ಟೇ ಬುದ್ಧಿವಂತರಾದರೂ ಕೂಡ ಅಪಾಯಕ್ಕೆ ಸಿಲುಕಿದಾಗ ಇನ್ನೊಬ್ಬರ ಸಹಾಯ ಬೇಕು. ಆದ್ರೆ, ನಿತ್ಯ ಪ್ರಕೃತಿಯೊಂದಿಗೆ ಒಡನಾಟವಿರುವ ಜಾನುವಾರುಗಳು ನಿಸರ್ಗದತ್ತವಾಗಿಯೇ ತಮ್ಮನ್ನು ತಾವು ರಕ್ಷಿಸಿಕೊಂಡವು.
ಇದನ್ನೂ ಓದಿ: ಗಂಗಾವತಿ: ನಡುಗಡ್ಡೆಯಲ್ಲಿ ಸಿಲುಕಿದ್ದ ಜನ, ಜಾನುವಾರುಗಳ ರಕ್ಷಣೆ