ಕೊಪ್ಪಳ: ಮಹಾಮಾರಿ ಕೊರೊನಾ ಸೋಂಕು ತಗುಲಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ 105 ವರ್ಷದ ವೃದ್ಧೆ ಸದ್ಯ ಸಂಪೂರ್ಣ ಗುಣಮುಖರಾಗಿದ್ದಾರೆ.
ತಾಲೂಕಿನ ಕಾತರಕಿ ಗ್ರಾಮದ 105 ವರ್ಷದ ಕಮಲಮ್ಮ ಲಿಂಗನಗೌಡ ಹಿರೇಗೌಡ್ರ ಅವರಿಗೆ ಕೆಲ ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಅವರಿಗೆ ಕೊರೊನಾ ಪರೀಕ್ಷೆ ಮಾಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕಿದ್ದು, ಮಗ ಶಂಕರಗೌಡ ಅವರ ಕೊಪ್ಪಳದ ನಿವಾಸದಲ್ಲಿ ಹೋಂ ಐಸೋಲೇಶನ್ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು.
ವೃದ್ಧೆಯ ಮೊಮ್ಮಗ ಡಾ. ಶ್ರೀನಿವಾಸ್ ಹ್ಯಾಟಿ ಅಜ್ಜಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಿದ್ದಾರೆ. ಬಳಿಕ ಟೆಸ್ಟ್ ಮಾಡಿಸಿದಾಗ ಕೊರೊನಾ ವರದಿ ನೆಗಟಿವ್ ಬಂದಿದೆ ಎಂದು ಡಾ. ಶ್ರೀನಿವಾಸ್ ಹ್ಯಾಟಿ ತಿಳಿಸಿದ್ದಾರೆ. ಈ ಮೂಲಕ 105ರ ವೃದ್ಧೆ ಕೊರೊನಾ ಗೆದ್ದು ಬಂದು ಭರವಸೆ ಮೂಡಿಸಿದ್ದಾರೆ.