ಗಂಗಾವತಿ: ಗದಗ ಜಿಲ್ಲೆಯ ಚಿಕ್ಕೇನಕೊಪ್ಪದಲ್ಲಿ ನಡೆಯುವ ಜಾತ್ರೆ, ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ನೆರವಾಗಲಿ ಎಂದು ಕಾರಟಗಿ ಪಟ್ಟಣದಿಂದ 101 ಕ್ವಿಂಟಾಲ್ (ಹತ್ತು ಸಾವಿರದ ನೂರು ಕೆಜಿ) ಅಕ್ಕಿಯನ್ನು ಕಳುಹಿಸಿ ಕೊಡಲಾಯಿತು.
ಪಟ್ಟಣದ ರೈಸ್ ಮಿಲ್ಲರ್, ದಲ್ಲಾಳಿ ಅಂಗಡಿ ವರ್ತಕರು, ಉದ್ಯಮಿ ಹಾಗೂ ವರ್ತಕರಿಂದ ಅಕ್ಕಿಯನ್ನು ಸಂಗ್ರಹಿಸಲಾಗಿತ್ತು. ಬಳಿಕ ಸಾರ್ವಜನಿಕರು ಮತ್ತು ಶ್ರೀಮಠದ ಭಕ್ತರು ನೀಡಿದ ಅಕ್ಕಿ ಸೇರಿ ಒಟ್ಟು 101 ಕ್ವಿಂಟಾಲ್ ಅಕ್ಕಿಯನ್ನು ಕಳುಹಿಸಿಕೊಡಲಾಯಿತು.
ದಾನ ಹಾಗೂ ಧರ್ಮಕ್ಕೆ ಈ ಭಾಗದಲ್ಲಿನ ಜನ ಹೆಚ್ಚಿನ ಪ್ರಮಾಣದಲ್ಲಿ ನೆರವು ಕೊಡುತ್ತಾರೆ. ಪ್ರತಿ ವರ್ಷ ಕೊಪ್ಪಳದ ಗವಿಮಠಕ್ಕೂ ಇಲ್ಲಿಂದ ನೂರಾರು ಕ್ವಿಂಟಾಲ್ ಅಕ್ಕಿ ಕಳಿಸಲಾಗುತ್ತಿದ್ದು, ಅದೇ ರೀತಿ ಕಳೆದ ಹಲವು ವರ್ಷದಿಂದ ಗದಗದ ಚಿಕ್ಕೇನಕೊಪ್ಪಕ್ಕೂ ಇಲ್ಲಿಂದ ಅಕ್ಕಿ ಕಳಿಸಲಾಗುತ್ತಿದೆ ಎಂದು ವರ್ತಕರು ಹೇಳಿದರು.