ಕೋಲಾರ: ಜಾಗತಿಕ ಮಟ್ಟದಲ್ಲಿ ಭಾರತೀಯರ ಬುದ್ಧಿವಂತಿಕೆ ಬಗ್ಗೆ ಸಾಬೀತಾಗುತ್ತಿದೆ. ವರ್ಲ್ಡ್ ಮೆಮೊರಿ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕೋಲಾರ ಮೂಲದ ಬಾಲಕ ಅದನ್ನು ಮತ್ತೆ ನಿಜ ಮಾಡಿದ್ದಾನೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಕೋಲಾರದ ಅಚಿಂತ್ ಹಲವು ಪದಕಗಳನ್ನು ಬಾಚಿಕೊಂಡಿದ್ದಾರೆ.
ವರ್ಲ್ಡ್ ಮೆಮೊರಿ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಅಚಿಂತ್ 1 ಚಿನ್ನದ ಪದಕ, 5 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಪ್ರಥಮ ಬಾರಿಗೆ ಮುಂಬೈನ ಸಿಐಡಿಇಒ ಎಕ್ಸಿಬಿಷನ್ ಸೆಂಟರ್‌ನಲ್ಲಿ ನಡೆದ ವರ್ಲ್ಡ್ ಮೆಮೊರಿ ಚಾಂಪಿಯನ್ ಶಿಪ್‌ನಲ್ಲಿ ಕೋಲಾರದ ಆರ್.ವಿ. ಶಾಲೆಯ 7ನೇ ತರಗತಿ ವಿದ್ಯಾರ್ಥಿ ಅಚಿಂತ್ ಬಿ.ಎ. ಭಾಗವಹಿಸಿದ್ದು, 10 ಪದಕಗಳನ್ನು ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ.
ನವೆಂಬರ್ ತಿಂಗಳ 24, 25 ಮತ್ತು 26 ರಂದು ನಡೆದ ಈ ಸ್ಪರ್ಧೆಯಲ್ಲಿ ಮಕ್ಕಳ ವಿಭಾಗದಲ್ಲಿ 2ನೇ ಸ್ಥಾನ ಪಡೆದರು. ವರ್ಲ್ಡ್ ಮೆಮೊರಿ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ 23 ದೇಶಗಳಿಂದ 750ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 3 ದಿನಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ ನೆನಪಿನ ಶಕ್ತಿಯ ಆಧಾರದ ಮೇಲೆ ನಂಬರ್, ಬೈನರಿ, ಸ್ಪೀಡ್‌ಕಾರ್ಡ್ಸ್, ಸ್ಪೋಕನ್ ನಂಬರ್ಸ್, ನೇಮ್ಸ್ ಅಂಡ್ ಫೇಸಸ್, ಹಿಸ್ಟಾರಿಕಲ್ ಡೇಟ್ಸ್ ಗೇಮ್ಗಳು 10 ವಿವಿಧ ಸುತ್ತುಗಳನ್ನು ಒಳಗೊಂಡು ಆಡಿಸಲಾಗಿತ್ತು.
ಅಚಿಂತ್ ಕೋಲಾರದ ಅಮಿತ್ ಬಿ.ಆರ್. ಹಾಗೂ ಬಿ. ಹರ್ಷಿತಾ ದಂಪತಿ ಪುತ್ರರಾಗಿದ್ದಾರೆ. ನಗರದ ಕಾರಂಜಿ ಕಟ್ಟೆ ಮೂಲದ ಬಾಲಕನ ವಿಶ್ವ ದಾಖಲೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ನೆನಪಿನ ಶಕ್ತಿ ಆಧಾರದ ಮೇಲೆ ನಡೆದ ಗೇಮ್ಸ್ನಲ್ಲಿ ಮಕ್ಕಳ ವಿಭಾಗದಲ್ಲಿ 2ನೇ ಸ್ಥಾನ ಪಡೆದು ಪ್ರಥಮ ಬಾರಿಗೆ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಇದನ್ನೂ ಓದಿ: ಎಟಿಪಿ ಶ್ರೇಯಾಂಕ: ಅಗ್ರಪಟ್ಟ ಉಳಿಸಿಕೊಂಡ ನೊವಾಕ್ ಜೊಕೊವಿಚ್