ಕೋಲಾರ: ಕುಡುಕ ಗಂಡಂದಿರ ಕಾಟ ತಾಳಲಾರದೇ ಮಹಿಳೆಯರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಘಟನೆ ಕೋಲಾರದಲ್ಲಿ ಜರುಗಿದೆ.
ಕೋಲಾರ ಜಿಲ್ಲೆ ಕೆಜಿಎಫ್ ನಗರದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಮಹಿಳೆಯರು, ಕುಡುಕ ಗಂಡಂದಿರಿಂದ ಅನುಭವಿಸುತ್ತಿರುವ ಹಿಂಸೆ ಕುರಿತು ಅಳಲು ತೋಡಿಕೊಂಡರು.
ಲಾಕ್ ಡೌನ್ ಹಿನ್ನೆಲೆ ಮದ್ಯ ಸಿಗದೇ ಮನೆಯಲ್ಲಿಯೇ ಇದ್ದ ಗಂಡಂದಿರು, ಮದ್ಯದಂಗಡಿಗಳು ತೆರೆಯುತ್ತಿದ್ದಂತೆ, ಕುಡಿಯುವುದಕ್ಕಾಗಿ ಮನೆಯಲ್ಲಿದ್ದ ಆಹಾರ ಸಾಮಗ್ರಿಗಳನ್ನೂ, ಬೆಲೆಬಾಳುವ ವಸ್ತುಗಳನ್ನು ಮಾರಿಕೊಳ್ಳುತ್ತಿದ್ದಾರೆ. ಜೊತೆಗೆ ಕುಡಿದು ಬಂದ ಅಮಲಿನಲ್ಲಿ ತಮ್ಮ ಮೇಲೆ ಹಲ್ಲೆ ಎಸಗುತ್ತಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.