ಕೋಲಾರ: ಮಹಿಳೆಯೊಬ್ಬರು ಏಕಕಾಲಕ್ಕೆ ಮೂರು ಮಕ್ಕಳಿಗೆ ಜನ್ಮ ನೀಡಿದ ಘಟನೆ ನಗರದ ಎಸ್.ಎನ್.ಆರ್. ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಸುಮಾರು ಅರ್ಧ ಗಂಟೆ ಕಾಲ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಮೂವರು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ನಗರದ ಮುನಿರತ್ನಮ್ಮ ಗರ್ಭಿಣಿಯಾಗಿದ್ದಾಗ ಹೊಟ್ಟೆಯಲ್ಲಿ ಮೂರು ಮಕ್ಕಳಿರುವ ವಿಚಾರ ತಿಳಿದು ಬಂದಿತ್ತು. ಅಪೌಷ್ಟಿಕತೆ ಉಂಟಾಗದ ರೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿತ್ತು. ಅಲ್ಲದೆ ಮುನಿರತ್ನಮ್ಮಗೆ ಇದು ಎರಡನೇ ಹೆರಿಗೆಯಾಗಿತ್ತು.
ಹೆರಿಗೆ ತಜ್ಞರಾದ ಡಾ. ನಾಗವೇಣಿ ಎಂಬುವರು ಸುಮಾರು ಅರ್ಧ ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.