ಕೋಲಾರ: ತೈವಾನ್ ಮೂಲದ ಬಹುರಾಷ್ಟ್ರೀಯ ವಿಸ್ಟ್ರಾನ್ ಕಂಪನಿಯಲ್ಲಿ ಇತ್ತೀಚೆಗೆ ನಡೆದ ಕೆಲ ಕಾರ್ಮಿಕರ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಇನ್ನು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ವಿಸ್ಟ್ರಾನ್, ಕರ್ನಾಟಕದಲ್ಲಿ ಶ್ರೀಘ್ರವಾಗಿ ಕೆಲಸ ಆರಂಭಿಸುವುದಾಗಿ ತಿಳಿಸಿದೆ.
ವಿಸ್ಟ್ರಾನ್ ಆಡಳಿತ ಮಂಡಳಿ ವತಿಯಿಂದ ಈ ಪತ್ರ ಬರೆಯಲಾಗಿದ್ದು, ಘಟನೆ ವೇಳೆ ಕಂಪನಿಯೊಂದಿಗೆ ಸಹಕಾರ ನೀಡಿದ ಸರ್ಕಾರಕ್ಕೆ ಪತ್ರದ ಮುಖೇನ ಅಭಿನಂದನೆಗಳನ್ನು ಸಲ್ಲಿಸಿದೆ. ಜೊತೆಗೆ ಪೊಲೀಸ್ ತನಿಖೆಗೆ ಪೂರ್ಣ ಸಹಕಾರ ನೀಡುವುದಾಗಿ ಉಲ್ಲೇಖ ಮಾಡಲಾಗಿದೆ.
ಇತ್ತೀಚೆಗೆ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಘಟನೆಯಿಂದ ತೀವ್ರವಾಗಿ ನೊಂದಿದ್ದು, ಈ ವೇಳೆ ರಾಜ್ಯ ಸರ್ಕಾರದಿಂದ ದೊರೆತ ಬೆಂಬಲವನ್ನು ಪ್ರಶಂಸಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಓದಿ...ವಿಸ್ಟ್ರಾನ್ ಕಂಪನಿಯಲ್ಲಿ ದಾಂಧಲೆ: ನೂರಾರು ಕೋಟಿ ರೂಪಾಯಿ ನಷ್ಟ, 11,500 ಕಾರ್ಮಿಕರು ಬೀದಿ ಪಾಲು
ಇನ್ನು ವಿಶ್ವದಾದ್ಯಂತ ನಾವು ಉತ್ತಮ ಅಭ್ಯಾಸ ಮಾಡುತ್ತಿದ್ದು, ಕಾರ್ಮಿಕರ ಹಿತ ರಕ್ಷಣೆಗಾಗಿ ಕಂಪನಿಯನ್ನು ಶೀಘ್ರ ಪ್ರಾರಂಭಿಸುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ತಿಳಿಸಿದ್ದಾರೆ. ಅಲ್ಲದೆ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ಭಾರತದಲ್ಲಿ ಯಶಸ್ವಿಯಾಗಿಸಲು ನಾವು ಬದ್ಧರಾಗಿದ್ದು, ನಮ್ಮ ಜಾಗತಿಕ ಯೋಜನೆಗಳು, ಪ್ರಮುಖ ಮಾರುಕಟ್ಟೆಯಲ್ಲಿ ನಮ್ಮ ಉಪಸ್ಥಿತಿಯನ್ನು ವಿಸ್ತರಿಸಲು ಮುಂದಾಗುತ್ತೇವೆ ಎಂದು ಉಲ್ಲೇಖಿಸಲಾಗಿದೆ.