ಕೋಲಾರ: ವಾಲೀಬಾಲ್ ಕ್ರೀಡಾಂಗಣ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಮೂವರಿಗೆ ಚಾಕು ಇರಿದಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ತಾಲೂಕಿನ ಕೆ.ಬಿ.ಹೊಸಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಮಂಜುನಾಥ್ (38), ಅಮರೇಶ್ (22) ಹಾಗೂ ಮಣಿ (24) ಮೂವರು ಚಾಕು ಇರಿತಕ್ಕೊಳಗಾಗಿದ್ದಾರೆ. ನಿನ್ನೆ ವಾಲೀಬಾಲ್ ಆಡುವುದಕ್ಕಾಗಿ ಎರಡು ಗುಂಪುಗಳ ಮಧ್ಯೆ ಮೈದಾನ ವಿಚಾರವಾಗಿ ಗಲಾಟೆ ನಡೆದಿತ್ತು. ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ಮಾಡುವ ವೇಳೆ ಏಕಾಏಕಿ ದಾಳಿ ನಡೆದಿದ್ದು, ಮತ್ತೊಂದು ಗುಂಪುನವರು ಕಾರದ ಪುಡಿ ಎರಚಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಇದೇ ಗ್ರಾಮದ ವಿನೋದ್, ಮುನಿಯಪ್ಪ, ಮಂಜುನಾಥ್ ಹಾಗೂ ಮುತ್ತು ಎಂಬುವರು ಹಲ್ಲೆ ನಡೆಸಿದ್ದರ ಎಂಬ ಆರೋಪವಿದೆ. ಮಣಿ ಎಂಬಾತನಿಗೆ ಕೈ ಹಾಗೂ ಕಿಡ್ನಿಗೆ ಗಂಭೀರ ಗಾಯವಾಗಿದೆ. ಅಮರೇಶ್ ಹಾಗೂ ಮಂಜುನಾಥ್ ಎಂಬುವರ ಬೆನ್ನಿಗೆ ಇರಿಯಲಾಗಿದೆ. ಮೂವರಲ್ಲಿ ಇಬ್ಬರು ಪರಿಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ. ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.