ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ 56ನೇ ಹುಟ್ಟುಹಬ್ಬ ಆಚರಣೆ ಹಿನ್ನೆಲೆ ಕೋಲಾರದಲ್ಲಿ ಭರ್ಜರಿ ಬಿರಿಯಾನಿ ಬಾಡೂಟದ ವ್ಯವಸ್ಥೆ ಮಾಡಲಾಗಿದೆ. ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಬರುವ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಮುಖಂಡರಿಗಾಗಿ ಭರ್ಜರಿ ಬಿರಿಯಾನಿ ಬಾಡೂಟ ತಯಾರಿಸಲಾಗಿದ.
ಕೋಲಾರ ಕ್ಷೇತ್ರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪರ್ಧೆ ಕೇಳಿ ಬರುತ್ತಿದ್ದಂತೆ ಈಗಾಗಲೇ ರಾಜಕೀಯ ಸಂಚಲನ ಮೂಡಿದೆ. ಅದರಂತೆ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಹಾಗೂ ಸಿದ್ದರಾಮಯ್ಯ ಒಂದು ಕಾಲದ ಶಿಷ್ಯ ಮಾಜಿ ಸಚಿವ ವರ್ತೂರು ಪ್ರಕಾಶ್ ಹುಟ್ಟುಹಬ್ಬದ ನೆಪದಲ್ಲಿ ಚುನಾವಣೆಗೆ ಭರ್ಜರಿ ತಯಾರಿ ಮಾಡುತ್ತಿದ್ದಾರೆ. ಸುಮಾರು 30 ರಿಂದ 40 ಸಾವಿರ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಅದಕ್ಕಾಗಿ ಸುಮಾರು 5 ಸಾವಿರ ಕೆಜಿ ಚಿಕನ್ ಬಿರಿಯಾನಿ ಹಾಗೂ 1ಟನ್ ಚಿಕನ್ ಗ್ರೇವಿಯನ್ನ ತಯಾರಿಸಲಾಗಿದೆ.
ಅದರಂತೆ ಕೋಲಾರ ನಗರದ ಬೈರೇಗೌಡ ಲೇಔಟ್ ಬಳಿ ಬೃಹತ್ ವೇದಿಕೆ ಹಾಕಿ ವೇದಿಕೆ ಹಿಂಭಾಗದಲ್ಲಿ ಚಿಕನ್ ಬಿರಿಯಾನಿ ತಯಾರು ಮಾಡಲಾಗುತ್ತಿದೆ. ಕಾರ್ಯಕ್ರಮದ ಮೂಲಕ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ವರ್ತೂರು ಇದು ವಿಜಯೋತ್ಸವ ಹಾಗೂ ಫಲಿತಾಂಶದ ದಿನ ಎಂದೆಲ್ಲಾ ವರ್ಣಿಸಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ, ಆರೋಗ್ಯ ಸಚಿವ ಸುಧಾಕರ್, ಸಂಸದ ಮುನಿಸ್ವಾಮಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಸಾವರ್ಕರ್ ವಿಷಯದಲ್ಲಿ 75 ವರ್ಷದ ಬಳಿಕ ಕಾಂಗ್ರೆಸ್ಗೆ ಜ್ಞಾನೋದಯವಾಗಿದೆ: ಸಚಿವ ಸುನಿಲ್ ಕುಮಾರ್