ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ಕೋಲಾರದಿಂದ ಆರಂಭವಾಗಿ ಬೆಂಗಳೂರು ತಲುಪಿ ಇದೀಗ ಮತ್ತೆ ಕೋಲಾರ ಪೊಲೀಸರಿಗೆ ವರ್ಗಾವಣೆಯಾಗಿದೆ.
ವರ್ತೂರು ಅಪಹರಣ ಪ್ರಕರಣ ಕುರಿತು ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಈಗ ಬೆಂಗಳೂರಿನಿಂದ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆಯಾಗಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಬುಧವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಕೋಲಾರ ಪೊಲೀಸರು ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ವಿಚಾರಣೆ ನಡೆಸಿದರು. ಕೋಲಾರ ತಾಲೂಕಿನ ಬೆಗ್ಲಿ ಹೊಸಹಳ್ಳಿ ಬಳಿ ಇರುವ ರಕ್ಷಿತ್ ಫಾರ್ಮ್ ಹೌಸ್‌ನಲ್ಲಿ ಸಂಜೆ 6 ರಿಂದ 7 ಗಂಟೆಯವರೆಗೆ ಎಎಸ್ಪಿ ಜಾಹ್ನವಿ ನೇತೃತ್ವದಲ್ಲಿ ವಿಚಾರಣೆ ನಡೆಸಲಾಯಿತು. ಈ ವೇಳೆ ಪೊಲೀಸರಿಗೆ ಪ್ರಕಾಶ್ ಕೆಲ ಮಹತ್ವದ ಮಾಹಿತಿ ನೀಡಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ; ತನಿಖೆ ಮುಂದುವರೆದಿದೆ ಎಂದ ಬೊಮ್ಮಾಯಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಎಸ್ಪಿ ಇಲಕ್ಕಿಯಾ ಕರುಣಾಗರನ್ ನಿರ್ದೇಶನದಂತೆ ಎಎಸ್ಪಿ ಜಾಹ್ನವಿ ನೇತೃತ್ವದಲ್ಲಿ ಓರ್ವ ಡಿವೈಎಸ್‌ಪಿ, 3 ಜನ ಇನ್ಸ್ಪೆಕ್ಟರ್ ಹಾಗೂ ಐವರು ಪಿಎಸ್‌ಐಗಳ ವಿಶೇಷ ತಂಡ ರಚನೆ ಮಾಡಿ ವಿಚಾರಣೆ ಮುಂದುವರೆಸಿದ್ದಾರೆ. ಈಗಾಗಲೇ ಪ್ರಕಾಶ್ ಆರೋಗ್ಯ ತಪಾಸಣೆ ಕೂಡ ಮಾಡಲಾಗಿದ್ದು, ಹಲ್ಲೆ ನಡೆದಿರುವ ಸ್ಥಳ ಹಾಗೂ ಸಂಬಂಧಪಟ್ಟ ಸಾಕ್ಷ್ಯಗಳ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದಾರೆ.
ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ, ಪ್ರಾಣ ಬೆದರಿಕೆ, ಕೊಲೆ ಯತ್ನ ನಡೆದಿರುವ ಹಿನ್ನೆಲೆಯಲ್ಲಿ ಅವರಿಗೆ ಇಲಾಖೆಯಿಂದ ಓರ್ವ ಅಂಗ ರಕ್ಷಕನನ್ನು ನೇಮಕ ಮಾಡಲಾಗಿದ್ದು, ಫಾರ್ಮ್ ಹೌಸ್ಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.