ಕೋಲಾರ: ಕೊರೊನಾ ಆತಂಕದ ನಡುವೆಯೂ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಿಕ್ಕ ತಿರುಪತಿಯಲ್ಲಿ ವೈಕುಂಠ ಏಕಾದಶಿ ಆಚರಣೆ ವಿಜೃಂಭಣೆಯಿಂದ ನಡೆದಿದೆ.
ಕರ್ನಾಟಕದ ಚಿಕ್ಕ ತಿರುಪತಿಯೆಂದು ಖ್ಯಾತಿ ಪಡೆದಿರುವ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಮುಂಜಾನೆ 3 ಗಂಟೆಯಿಂದಲೇ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗಿದೆ. ವೆಂಕಟರಮಣಸ್ವಾಮಿ ದರ್ಶನಕ್ಕಾಗಿ ಬೆಳಗ್ಗೆ 5 ಗಂಟೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದರು.
ಆಂಧ್ರದ ತಿರುಮಲ-ತಿರುಪತಿಗೆ ಹೋಗಲಾರದವರು ಮಾಲೂರಿನ ಚಿಕ್ಕ ತಿರುಪತಿಗೆ ಬಂದು ಪ್ರಸನ್ನ ವೆಂಕಟರಮಣ ಸ್ವಾಮಿಯ ದರ್ಶನ ಪಡೆಯುತ್ತಾರೆ. ಇಲ್ಲಿಗೆ ಆಂಧ್ರ, ತಮಿಳುನಾಡು, ಕೇರಳ, ಬೆಂಗಳೂರು ನಗರ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.
ಕೊರೊನಾ ತೊಲಗುವ ಸಲುವಾಗಿ ಇಂದು ವೆಂಕಟರಮಣನಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಇನ್ನು ದೇವರ ದರ್ಶನಕ್ಕೆ ಲಕ್ಷಾಂತರ ಜನ ಸೇರುವ ಕಾರಣದಿಂದ ದೇವಸ್ಥಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು.