ಕೋಲಾರ: ಇಲ್ಲಿನ ಕ್ಲಾಕ್ ಟವರ್ಗೆ ಹಲವು ವರ್ಷಗಳ ಇತಿಹಾಸ ಇದೆ. ನಿರ್ಮಾಣವಾದಾಗಿನಿಂದ ಕೇವಲ ಸಮಯ ತೋರಿಸುತ್ತಾ ನಿಂತಿದ್ದ ಕ್ಲಾಕ್ ಟವರ್ಗೀಗ ಸಮಯ ಕೆಟ್ಟಿದೆ ಅನ್ನಿಸುತ್ತದೆ. ಹಾಗಾಗಿ ಸದ್ಯ ಇದೊಂದು ವಿವಾದದ ಕೇಂದ್ರವಾಗಿ ಕೋಲಾರ ಜಿಲ್ಲೆಯ ಜಿಲ್ಲಾಡಳಿತಕ್ಕೆ ತಲೆ ಬಿಸಿ ಉಂಟು ಮಾಡಿದೆ.
ಸುಮಾರು 35 ಅಡಿ ಉದ್ದದ ಕ್ಲಾಕ್ ಟವರ್ ಕಟ್ಟಡ, ಕಟ್ಟಡದ ಸುತ್ತಲು ಶಸ್ತ್ರಸಮೇತ ಸಜ್ಜಾಗಿ ನಿಂತಿರುವ ಪೊಲೀಸರು, ಅಲ್ಲಲ್ಲಿ ಆತಂಕ ಹಾಗೂ ಗಾಬರಿಯಿಂದಲೇ ಗಮನಿಸುತ್ತಿರುವ ಜನರು, ಜನರನ್ನು ಗುಂಪು ಸೇರದಂತೆ ಚದುರಿಸುತ್ತಿರುವ ಪೊಲೀಸರು... ಕೋಲಾರ ನಗರದ ಕ್ಲಾಕ್ ಟವರ್ ಸರ್ಕಲ್ನಲ್ಲಿ ಈ ದೃಶ್ಯಗಳು ಕಂಡುಬಂದವು.
ಕೋಲಾರ ಸಂಸದ ಎಸ್.ಮುನಿಸ್ವಾಮಿ ಏಕಾಏಕಿ ಪತ್ರಿಕಾಗೋಷ್ಠಿ ಕರೆದು ಕ್ಲಾಕ್ ಟವರ್ನಲ್ಲಿ ರಾಷ್ಟ್ರದ್ವಜ ಹಾರಿಸುತ್ತೇನೆ. ಇಲ್ಲವಾದಲ್ಲಿ ಅಲ್ಲಿ ರಾಷ್ಟ್ರದ್ವಜ ಹಾರಿಸುವವರೆಗೂ ಏಕಾಂಗಿಯಾಗಿ ಮೌನ ಪ್ರತಿಭಟನೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಇದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಕಾರಣ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಕ್ಲಾಕ್ ಟವರ್ ಪ್ರದೇಶದಲ್ಲಿ ಹಲವು ವರ್ಷಗಳಿಂದ ಹಿಂದೂಗಳ ಮೆರವಣಿಗೆಗೆ ನಿಷೇಧ ಹೇರಲಾಗಿದೆ.
ಇದನ್ನೂ ಓದಿ: ಉಕ್ರೇನ್ನಲ್ಲಿ ಹತನಾಗಿದ್ದ ನವೀನ್ : ಮೆಡಿಕಲ್ ಕಾಲೇಜಿಗೆ ಪಾರ್ಥೀವ ಶರೀರ ನೀಡಲು ಮುಂದಾದ ಕುಟುಂಬ
ಮೊದಲು ಸಂಸದರಿಗೆ ಪ್ರತಿಭಟನೆ ಮಾಡದಂತೆ ನೋಟಿಸ್ ನೀಡಲಾಗಿದೆ. ಅದರಂತೆ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು, ಪ್ರತಿಭಟನೆಗೆ ಅವಕಾಶ ನೀಡಿಲ್ಲ. ಮಾರ್ಚ್-21ರ ನಂತರ ಏಳು ದಿನಗಳ ಒಳಗಾಗಿ ಪ್ರತಿಭಟನೆಗೆ ಅನುಮತಿ ನೀಡುವುದಾಗಿ ನೋಟಿಸ್ನಲ್ಲಿ ಸೂಚನೆ ನೀಡಲಾಗಿದೆ. ಜೊತೆಗೆ ಎರಡೂ ಕೋಮಿನ ಮುಖಂಡರುಗಳ ಸಭೆ ಕರೆದು ಕ್ಲಾಕ್ ಟವರ್ನಲ್ಲಿರುವ ಸದ್ಯದ ಪರಿಸ್ಥಿತಿ ಅವಲೋಕಿಸಿ ಅಗತ್ಯ ಕ್ರಮ ಕೈಗೊಳ್ಳುವ ನಿರ್ಧಾರ ಮಾಡಲಾಗಿದೆ. ಈ ನಡುವೆ ಇಂದು ಜಿಲ್ಲಾಡಳಿತ ನೀಡಿದ್ದ ನೋಟಿಸ್ ಮೀರಿ ಸಂಸದ ಮುನಿಸ್ವಾಮಿ ಕ್ಲಾಕ್ಟವರ್ನಲ್ಲಿ ಪ್ರತಿಭಟನೆ ಮಾಡ್ತಾರೆ ಅನ್ನೋ ಮಾಹಿತಿ ಪಡೆದ ಪೊಲೀಸ್ ಇಲಾಖೆ ಇಂದು ದಿನಪೂರ್ತಿ ಕ್ಲಾಕ್ ಟವರ್ನಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿತ್ತು.
ಈ ನಡುವೆ ಕೋಲಾರದ ಸೋಮೇಶ್ವರ ಸ್ವಾಮಿ ದೇವಾಲಯದ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ಮುನಿಸ್ವಾಮಿ, ಕಾನೂನಿನಡಿ ಎಲ್ಲರೂ ಒಂದೇ ಹಾಗಾಗಿ ಕಾನೂನಿಗೆ ತಲೆಬಾಗುತ್ತೇನೆ. ಮಾರ್ಚ್-21ರ ನಂತರ ಪ್ರತಿಭಟನೆ ಮಾಡುತ್ತೇನೆ ಎಂದಿದ್ದಾರೆ.