ಕೋಲಾರ : ಶಾಲಾ ಕಾಲೇಜುಗಳ ಶಿಕ್ಷಣದಲ್ಲಿ ಸಮಾನತೆ ಇರಬೇಕು ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಹಿಜಾಬ್ ಕುರಿತು ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಮಾತನಾಡಿದ ಅವರು, ವಿವಿಧ ಸಮುದಾಯ, ಧರ್ಮಗಳಿರುವ ದೇಶ ನಮ್ಮದು. ವಿವಿಧತೆ ಇದ್ದರೂ ಏಕತೆಯಲ್ಲಿ ಬದುಕುತ್ತಿರುವ ದೇಶ ಭಾರತ ಎಂದು ಹೇಳಿದರು.
ಅಲ್ಲದೆ ಒಂದು ಧರ್ಮದವರು ಮಾತ್ರ ಹಿಜಾಬ್ ಹಾಕಿಕೊಳ್ಳುತ್ತಾರೆ ಎಂದರೆ ಅದು ಸರಿಯಲ್ಲ. ನಮಗೆ ಅವರ ಸಂಪ್ರದಾಯಗಳ ಕುರಿತು ಅಗೌರವ ಇಲ್ಲ. ಆದರೆ, ಶಿಕ್ಷಣದ ವಿಷಯ ಬಂದಾಗ ಸಮಾನತೆ ಇರಬೇಕು. ಅವರು ಶಿಕ್ಷಣದ ಕೊರತೆಯಿಂದಾಗಿ ಹಿಜಾಬ್ ಬೇಕೆಂದು ಧರ್ಮಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಹೀಗಾಗಿ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಇನ್ನು ನ್ಯಾಯಾಲಯ ಯಾವುದೇ ಆದೇಶ ಕೊಟ್ಟರೂ ಅದನ್ನು ನಾವು ಗೌರವಿಸಬೇಕು. ನ್ಯಾಯಾಲಯದ ಆದೇಶದ ವಿರುದ್ದ ಹೋದರೆ ನಾವು ದೇಶಕ್ಕೆ ಅಗೌರವ ತೋರಿದಂತಾಗುತ್ತದೆ. ಹಾಗಾಗಿ ಹಿಜಾಬ್ ಗಿಂತಲೂ ಶಿಕ್ಷಣಕ್ಕೆ ಮೊದಲ ಪ್ರಾಮುಖ್ಯತೆ ನೀಡಬೇಕೆಂದು ಹೇಳಿದರು.
ಕೋಲಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ : ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಕ್ಕಳ ಮತ್ತು ಹೆರಿಗೆ ವಾರ್ಡ್ ಗಳಿಗೆ ಭೇಟಿ ನೀಡಿದ ತಂಡ, ಆಸ್ಪತ್ರೆಯಲ್ಲಿನ ನೀರಿನ ಸಮಸ್ಯೆ, ಶೌಚಾಲಯದ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ಸ್ವಚ್ಚತೆಯ ಕೊರತೆ ಕಂಡು ಬಂದ ಹಿನ್ನೆಲೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇನ್ನು ಗರ್ಭಿಣಿಯರಿಗೆ ಅಂಗನವಾಡಿಗಳಲ್ಲಿ ಸರ್ಕಾರದ ವತಿಯಿಂದ ನೀಡಲಾಗುವ ಆಹಾರ ಸರಿಯಾಗಿ ತಲುಪದಿರುವುದು ಕಂಡು ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಆಸ್ಪತ್ರೆಯಲ್ಲಿ ನರ್ಸ್ ಗಳ ಕೊರತೆ ಹಾಗೂ ಸಿಬ್ಬಂದಿ ಕೊರತೆಯೂ ಕಂಡು ಬಂದಿದೆ. ಆಸ್ಪತ್ರೆಯಲ್ಲಿ ಕುಡಿಯುವ ನೀರು ಸೇರಿದಂತೆ ಸ್ವಚ್ಛತೆ ಕಾಪಾಡಬೇಕೆಂದು ಎಚ್ಚರಿಕೆ ನೀಡಿದರು.
ಅಲ್ಲದೆ ನರಸಿಂಹ ರಾಜ ಒಡೆಯರ್ ಅವರ ಕುಟುಂಬ ಕರ್ನಾಟಕದಲ್ಲಿ ತಮ್ಮದೇ ಆದ ಕೊಡುಗೆ ಕೊಟ್ಟಿದ್ದು ಆಸ್ಪತ್ರೆಯಲ್ಲಿ ಅವರ ಭಾವಚಿತ್ರವನ್ನು ಇಡುವುದರೊಂದಿಗೆ, ನರಸಿಂಹರಾಜ್ ಒಡೆಯರ್ ಎಂದು ನಾಮಫಲಕ ಹಾಕುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಎಂ.ಎಲ್.ಸಿಗಳಾದ ತೇಜಸ್ವಿನಿ ಗೌಡ, ಹೇಮಲತಾ ಹಾಗೂ ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಹಿಜಾಬ್ ವಿವಾದ ಪ್ರಕರಣ.. ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು ?