ಕೋಲಾರ: ಜಿಲ್ಲೆ ಸೇರಿದಂತೆ ಹಲವೆಡೆ ವಾಯುಭಾರ ಕುಸಿತದಿಂದ ಭಾರಿ ಮಳೆಯಾಗಿದ್ದು, ರೈತರು ವರ್ಷಪೂರ್ತಿ ಕಷ್ಟಪಟ್ಟು ಬೆಳೆದಿದ್ದ ಬೆಳೆ ಇನ್ನೇನು ಕೈಗೆ ಸಿಗುವಷ್ಟರಲ್ಲಿ ನೆಲಕಚ್ಚಿದೆ.
ಈ ವರ್ಷ ಆರಂಭದಿಂದ ಉತ್ತಮ ಮಳೆ ಆಗಿದೆ. ಹಿಂಗಾರು ಮಳೆ ಉತ್ತಮವಾಗಿ ಆದ ಪರಿಣಾಮ ಒಳ್ಳೆಯ ಬೆಳೆ ಬಂದಿದೆ. ಈ ವರ್ಷ 659.12ಮಿ.ಮೀ ಮಳೆಗೆ 822.2.ಮಿ.ಮೀ ಮಳೆಯಾಗಿದ್ದು, 68505 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ಆದರೆ ಮೊನ್ನೆ ಸುರಿದ ಮಳೆಯಿಂದ ರಾಗಿ ತೆನೆಗಳೆಲ್ಲಾ ಭೂಮಿಗೆ ಬಿದ್ದು ಹಾಳಾಗಿದೆ. ಇದರಿಂದ ಸಾವಿರಾರು ರೈತರ ವರ್ಷದ ಕೂಲಿಗೆ ಮಳೆ ಕೊಳ್ಳಿ ಇಟ್ಟಿದೆ.
ಸತತ ಎರಡು ವರ್ಷಗಳಿಂದ ಬರಕ್ಕೆ ಬಲಿಯಾಗಿದ್ದ ರೈತರಲ್ಲಿ ಸಂತಸ ಮನೆಮಾಡಿತ್ತು. ಇನ್ನು 15 ದಿನಗಳಲ್ಲಿ ರಾಗಿ ಬೆಳೆಯನ್ನು ಕಟಾವು ಮಾಡಬೇಕಿದ್ದ ಸಂದರ್ಭದಲ್ಲಿ ವಾಯುಭಾರ ಕುಸಿತಗೊಂಡು ಕಳೆದ ನಾಲ್ಕೈದು ದಿನಗಳಿಂದ ಸುರಿದ ಜಿಟಿ ಜಿಟಿ ಮಳೆ ಹಾಗೂ ಮೋಡಕವಿದ ವಾತಾವರಣದಿಂದ ರಾಗಿ ತೆನೆಯೆಲ್ಲ ಭೂಮಿಯಲ್ಲಿ ಮಲಗಿದೆ. ರೈತರು ಸಾಲ ಮಾಡಿ ತಮ್ಮ ಶ್ರಮ ಹಾಕಿ ಬೆಳೆದಿದ್ದ ಬೆಳೆ ಕಣ್ಣಮುಂದೆ ಹಾಳಾಗುತ್ತಿದ್ದು, ರೈತರಿಗೆ ದಿಕ್ಕುತೋಚದಂತಾಗಿದೆ.
ಕೊರೊನಾ ಸಂದರ್ಭದಲ್ಲಿ ಕೊನೆಪಕ್ಷ ತುತ್ತಿನ ಚೀಲ ತುಂಬಿಸಿಕೊಳ್ಳುವಷ್ಟರಲ್ಲಿ ಮಳೆರಾಯನಿಂದಾಗಿ ಬಡ ರೈತರ ಬದುಕು ಮುರಾಬಟ್ಟೆಯಾಗಿದ್ದು, ಸರ್ಕಾರ ರೈತರ ನೆರವಿಗೆ ಧಾವಿಸಬೇಕಿದೆ.