ಕೋಲಾರ: ಮಗನೇ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೋಲಾರದಲ್ಲಿ ಜರುಗಿದೆ. ಶ್ರೀನಿವಾಸಪುರದ ಅಂಬೇಡ್ಕರ್ ಪಾಳ್ಯದಲ್ಲಿ ಈ ಘಟನೆ ಜರುಗಿದೆ.
ಅಂಬೇಡ್ಕರ್ ಪಾಳ್ಯದ ವೆಂಕಟೇಶ್ (65) ಎಂಬಾತ ಹತ್ಯೆಗೀಡಾಗಿದ್ದಾನೆ. ಮಗನ ಕೌಟುಂಬಿಕ ಸಮಸ್ಯೆಯನ್ನು ಸರಿಪಡಿಸುವ ಸಲುವಾಗಿ ಕಳೆದ ರಾತ್ರಿ ತಂದೆ ವೆಂಕಟೇಶ್ ಹಾಗೂ ಮಗ ನವೀನ್ ಎಂಬುವರ ನಡುವೆ ಗಲಾಟೆ ನಡೆದಿದೆ. ಇಂದು ನಸುಕಿನ ವೇಳೆ ಮನೆಯಲ್ಲಿದ್ದ ರುಬ್ಬು ಗುಂಡು ತೆಗೆದುಕೊಂಡ ಮಗ, ತಂದೆಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.
ಈ ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಆರೋಪಿ ನವೀನ್‌ನನ್ನು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಶ್ರೀನಿವಾಸಪುರ ಠಾಣೆಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.