ಕೋಲಾರ: ಶ್ರೀರಾಮನವಮಿ ಪ್ರಯುಕ್ತ ನಡೆಸಲಾಗುತ್ತಿದ್ದ ಶೋಭಾಯಾತ್ರೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಅಟ್ಟಹಾಸ ಮೆರೆದಿರುವ ಘಟನೆ ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿ ನಡೆದಿದೆ. ಮುಳಬಾಗಿಲು ಪಟ್ಟಣದಲ್ಲಿ ಲವಕುಶ ಜನ್ಮಭೂಮಿ ಪುಣ್ಯಕ್ಷೇತ್ರ ಟ್ರಸ್ಟ್ ವತಿಯಿಂದ ಶ್ರೀರಾಮನವಮಿ ಪ್ರಯುಕ್ತ ಅದ್ಧೂರಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಅದರ ಮೊದಲ ದಿನದ ಅಂಗವಾಗಿ ಶ್ರೀರಾಮನ ಶೋಭಾಯಾತ್ರೆ ಮುಳಬಾಗಿಲು ಪಟ್ಟಣದಲ್ಲಿ ಸಾಗುತ್ತಿದ್ದಾಗ ಈ ಪ್ರಕರಣ ನಡೆದಿದೆ.
ಏನಿದು ಘಟನೆ: ನಿನ್ನೆ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಆರಂಭವಾದ ಶೋಭಾಯಾತ್ರೆ ಸಂಜೆ 7.30 ರವರೆಗೆ ಜಹಂಗೀರ್ ಸರ್ಕಲ್ ಬಳಿ ಬರುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಈ ವೇಳೆ ಕತ್ತಲು ಆವರಿಸಿದೆ. ಕೆಲವೇ ಕ್ಷಣಗಳಲ್ಲಿ ಶೋಭಾಯಾತ್ರೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದಿಂದಾಗಿ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದ ಕೆಲ ಜನ ಚೆಲ್ಲಾಪಿಲ್ಲಿಯಾಗಿ ಓಡಲು ಆರಂಭಿಸಿದ್ದಾರೆ. ಕೆಲವರು ಕಲ್ಲು ತೂರಾಟ ನಡೆಸಿದವರ ಮೇಲೆ ಪ್ರತಿಯಾಗಿ ಕಲ್ಲು ತೂರಲು ಆರಂಭಿಸಿದರು.
ಈ ವೇಳೆ ಪರಿಸ್ಥಿತಿ ನಿಯಂತ್ರಿಸಿಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಕರೆಂಟ್ ಬಂದ ಮೇಲೆ ಶಾಂತವಾಗಿದ್ದ ಶೋಭಾಯಾತ್ರೆಯಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿ ಹೋಗಿತ್ತು. ರಸ್ತೆ ಬಳಿ ಇದ್ದ ಅಂಗಡಿಗಳನ್ನು ಬಂದ್ ಮಾಡಿಕೊಂಡು ಜನ ತಮ್ಮ ಮನೆ ಸೇರಿದ್ದರು. ಕೆಲ ಕಿಡಿಗೇಡಿಗಳು ಬೈಕ್ವೊಂದಕ್ಕೆ ಬೆಂಕಿ ಹಚ್ಚಿ ಕಾಲ್ಕಿತ್ತಿದ್ದರು. ಸ್ಥಳದಲ್ಲಿದ್ದ ಕೆಲ ಕಾರ್ಗಳು ಮತ್ತು ಪೊಲೀಸರ ವಾಹನಗಳ ಮೇಲೂ ಕಲ್ಲು ತೂರಿ ಪರಾರಿಯಾಗಿದ್ದಾರೆ.
ಓದಿ: ಕೊರೊನಾ ನಿಯಮ ಗಾಳಿಗೆ ತೂರಿದ ಜನ: ಲಾಠಿ ರುಚಿ ತೋರಿಸಿದ ಪೊಲೀಸರು
ಕ್ಷಣಾರ್ಧದಲ್ಲಿ ಎರಡು ಕೋಮಿನ ಜನರ ನಡುವೆ ಸಂಘರ್ಷಕ್ಕೆ ದಾರಿಮಾಡುವ ಸಾಧ್ಯತೆ ಇತ್ತು. ಆದರೆ ಪರಿಸ್ಥಿತಿಯನ್ನು ಅರಿತ ಪೊಲೀಸರು ಜನರನ್ನು ಚದುರಿಸಿದರು. ಶೋಭಾಯಾತ್ರೆ ಹಿನ್ನೆಲೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಿದ್ದರಿಂದ ಪರಿಸ್ಥಿತಿ ಹತೋಟಿಗೆ ಬರಲು ಕಾರಣವಾಯಿತು. ಸ್ಥಳಕ್ಕೆ ಬಂದ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಿ ಶೋಭಾಯಾತ್ರೆ ಮುಂದುವರೆಯಲು ಅನುವು ಮಾಡಿಕೊಟ್ಟರು.
ಮುಳಬಾಗಿಲು ತಾಲೂಕಿನ ಆವನಿ ಗ್ರಾಮಕ್ಕೆ ಶೋಭಾಯಾತ್ರೆ ತಡವಾಗಿ ತಲುಪಿತು. ಸದ್ಯ ಮುಳಬಾಗಿಲು ಪಟ್ಟಣದಲ್ಲಿ ಬೂದಿಮುಚ್ಚಿದ ಕೆಂಡದಂತಿದೆ. ಸ್ಥಳಕ್ಕೆ ಎಸ್ಪಿ ದೇವರಾಜ್, ಐಜಿಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಮುಳಬಾಗಿಲು ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜೊತೆಗೆ ಘಟನೆ ಸಂಬಂಧ ನಾಲ್ಕೈದು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.