ಕೋಲಾರ: ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಅವರನ್ನು ರೈತ ಸಂಘದ ಕಾರ್ಯಕರ್ತರು ತೀವ್ರ ತರಾಟೆ ತೆಗೆದುಕೊಂಡ ಘಟನೆ ನಗರದಲ್ಲಿ ನಡೆಯಿತು.
ಇಂದು ಕೋಲಾರ ಹೊರವಲಯದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಸಿ ವ್ಯಾಲಿ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯ ನಾಯಕರು ಹಾಗೂ ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಸಭೆ ಮುಗಿಯುತ್ತಿದ್ದ ಹಾಗೆ ಸ್ಥಳಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು, ಜಿಲ್ಲಾ ಉಸ್ತುವಾರಿ ಸಚಿವರನ್ನ ಹುಡುಕಿಕೊಡಿ ಎಂದು ಉಸ್ತುವಾರಿ ಸಚಿವ ನಾಗೇಶ್ ಅವರಿಗೆ ಮನವಿ ನೀಡಲು ಮುಂದಾದಾಗ ಸಚಿವ ನಾಗೇಶ್ ಕೆಂಡಾಮಂಡಲರಾದರು.
ಕೋಲಾರದಲ್ಲಿ ನಡೆದ ಜಿಲ್ಲಾ ಜನಪ್ರತಿನಿಧಿಗಳ ಸಭೆಗೆ ಆಗಮಿಸಿದ ರೈತ ಸಂಘದ ಮುಖಂಡರು ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಮಾತಿನ ಚಕಮಕಿ ನಡೆಯಿತು. ಕೊರೊನಾ ವೈರಸ್ನಿಂದ ಎಲ್ಲೆಡೆ ಆತಂಕ ಸೃಷ್ಟಿಯಾಗಿದ್ರು ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಜಿಲ್ಲೆಗೆ ಬಾರದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ರೈತ ಸಂಘದ ಕಾರ್ಯಕರ್ತರು ಆರೋಪಿಸಿದಾಗ, ಮಾತಿನ ಸಮರ ನಡೆಯಿತು.
ಸಚಿವರು ಕನಿಷ್ಠ ಅಧಿಕಾರಿಗಳ ಸಭೆ ನಡೆಸಿಲ್ಲ. ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿಲ್ಲ ಎಂದು ಸಚಿವರ ವಿರುದ್ಧ ಹರಿಹಾಯ್ದರು. ಪರಿಸ್ಥಿತಿಯನ್ನು ಅರಿತ ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್ ರೆಡ್ಡಿ ಕೂಡಲೇ ರೈತ ಸಂಘದ ಮುಖಂಡರನ್ನು ಹೊರಗೆ ಕಳುಹಿಸಿದ್ರು.