ಕೋಲಾರ: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮುಂಬರುವ ವಿಧಾನಸಭಾ ಚುನಾವಣೆಗೆ ಕ್ಷೇತ್ರ ಹುಡುಕಾಟದಲ್ಲಿ ತೊಡಗಿದ್ದಾರೆ. ಇದರ ಭಾಗವಾಗಿಯೇ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕಾ ಅಥವಾ ಬೇಡವಾ ಅನ್ನುವ ಕುರಿತು ಸ್ವತಃ ಕೋಲಾರ ಜನತೆಯ ನಾಡಿನ ಮಿಡಿತ ಅರಿಯಲು ಅವರೇ ಬಂದಿದ್ದರು. ಅಂತೆಯೇ, ಕೋಲಾರ ಜನತೆ ನೀಡಿದ ಅದ್ದೂರಿ ಸ್ವಾಗತ ಮತ್ತು ಜನಸ್ತೋಮ ನೋಡಿದ ಸಿದ್ದರಾಮಯ್ಯ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೋಲಾರಕ್ಕೆ ಬರುವೆ ಎಂದು ಘೋಷಣೆಯನ್ನೂ ಮಾಡಿದ್ದಾರೆ.
ಹೌದು, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮುಂದಿನ ವಿಧಾನಸಭಾ ಚುನಾವಣೆಯ ಕ್ಷೇತ್ರದ ಆಯ್ಕೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕೋಲಾರ ಸೇರಿದಂತೆ ಬಾದಾಮಿ, ವರುಣ, ಚಾಮರಾಜಪೇಟೆಯಲ್ಲಿ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಲಾಗುತ್ತಿದೆ. ಇದರ ನಡುವೆ ಕೋಲಾರದಲ್ಲಿ ಸ್ಪರ್ಧೆ ಮಾಡಲೇಬೇಕೆಂಬ ಒತ್ತಾಯ, ಮನವಿಗಳು ಬಂದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಸ್ವತಃ ಕೋಲಾರ ಜನರ ನಾಡಿಮಿಡಿತ ಅರಿಯಲು ಭಾನುವಾರ ಇಡೀ ದಿನ ಕೋಲಾರ ಪ್ರವಾಸ ಕೈಗೊಂಡಿದ್ದರು.
ಸಿದ್ದರಾಮಯ್ಯಗೆ ಸಿಕ್ತು ಅದ್ಧೂರಿ ಸ್ವಾಗತ: ಕೋಲಾರ ಪ್ರವಾಸದ ಮಾಡಿದ ಸಿದ್ದರಾಮಯ್ಯ ಅವರಿಗೆ ನಿರೀಕ್ಷೆಗಿಂತ ಹೆಚ್ಚಿನ ಅದ್ದೂರಿ ಸ್ವಾಗತ ಸಿಕ್ಕಿದೆ. ಜನತೆ ಕೂಡ ಉತ್ತಮವಾಗಿ ಸ್ಪಂದಿಸಿದ್ದಾರೆ. ಕಿಕ್ಕಿರಿದ್ದು ತುಂಬಿದ್ದ ಜನರನ್ನು ನೋಡಿದ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆಗೆ ಕೋಲಾರಕ್ಕೆ ಬತ್ತೀನಿ ಎಂದು ಘೋಷಣೆ ಮಾಡುವ ಮೂಲಕ ಕೋಲಾರದಿಂದ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನುವ ಮಾತುಗಳೂ ಕೇಳಿ ಬರುತ್ತಿವೆ.
ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರದ ಕ್ಷೇತ್ರದಲ್ಲಿ ಸ್ಫರ್ಧೆ: ಒಮ್ಮತ ಸೂಚಿಸಿದ ಜಿಲ್ಲೆಯ ಕೈ ಮುಖಂಡರು
ತಮ್ಮ ಪ್ರವಾಸದ ವೇಳೆ ಸಿದ್ದರಾಮಯ್ಯ ದೇವಾಲಯ, ಚರ್ಚ್, ಮಸೀದಿಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅವಳಿ ಜಿಲ್ಲೆಗಳ ಶಾಸಕರುಗಳ ಮತ್ತು ಮಾಜಿ ಶಾಸಕರುಗಳು ದಂಡೇ ಸಿದ್ದರಾಮಯ್ಯ ಅವರೊಂದಿಗೆ ಸೇರಿತ್ತು. ಮೆಥೋಡಿಸ್ಟ್ ಚರ್ಚ್ಗೆ ಬಂದಂತ ಸಿದ್ದರಾಮಯ್ಯ ಮಾಡಿದ ಭಾಷಣ ಕುತೂಹಲವನ್ನು ಹೆಚ್ಚಿಸಿದೆ.
ನಾಮಮತ್ರ ಹಾಕಬೇಕು ಅಂದಾಗ ಮತ್ತೆ ಬರ್ತೀನಿ: ಕೋಲಾರಕ್ಕೆ ಬರುವಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಶಾಸಕರಿಂದ ಒತ್ತಾಯ ಬಂದಿದ್ದು. ಇಂದು ಕೋಲಾರದ ಜನತೆಯಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ. ಎಲ್ಲರಿಗೂ ನಾನು ಧನ್ಯವಾದವನ್ನು ತಿಳಿಸುವೆ. ಕೋಲಾರದಲ್ಲಿ ಸ್ಪರ್ಧೆ ಮಾಡುವಂತೆ ನನ್ನ ಮೇಲೆ ಹೆಚ್ಚಿನ ಒತ್ತಡ ಮತ್ತು ಒತ್ತಾಯ ಇದೆ. ನಾನೂ ಈಗ ಬಾದಾಮಿ ಕ್ಷೇತ್ರದ ಶಾಸಕನಾಗಿದ್ದು, ವರುಣಾ, ಬಾದಾಮಿಯಿಂದಲೂ ಸ್ಪರ್ಧೆಗೆ ಮನವಿಯಿದೆ. ಕೋಲಾರದ ಜನತೆಗೆ ಅಬಾರಿಯಾಗಿದ್ದೇನೆ. ನಾನು 5 ವರ್ಷ ಮುಖ್ಯಮಂತ್ರಿ ಆಗಿದ್ದಾಗ ನಾನು ಧರ್ಮದ ಆಧಾರದಲ್ಲಿ ಕೆಲಸ ಮಾಡಿಲ್ಲ. ಎಲ್ಲರಿಗೂ ಸಮಾನವಾಗಿ ನೋಡಿದ್ದೇನೆ. ನಾನು ನಾಮಿನೇಷನ್ ಹಾಕಬೇಕು ಅಂದಾಗ ಮತ್ತೆ ಕೋಲಾರಕ್ಕೆ ಬರ್ತೀನಿ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು.
ಐಷರಾಮಿ ಬಸ್ನಲ್ಲಿ ಸಿದ್ದರಾಮಯ್ಯ ಸಂಚಾರ: ಕೋಲಾರ ಕ್ಷೇತ್ರದಲ್ಲಿ ಈಡೀ ದಿನ ಪ್ರವಾಸ ಕೈಗೊಂಡಿದ್ದ ಸಿದ್ದರಾಮಯ್ಯ ಐಷಾರಾಮಿ ಬಸ್ನಲ್ಲಿ ಸಂಚಾರ ನಡೆಸಿದರು. ರಾಮಸಂದ್ರ ಗಡಿಯಲ್ಲಿ ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಯಿತು. ಮಹಿಳೆಯರಿಂದ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ನಂತರ ಕೋಲಾರಮ್ಮ ದೇವಾಲಯಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ಮಹರ್ಷಿ ವಾಲ್ಮೀಕಿ, ಸಂಗೊಳ್ಳಿರಾಯಣ್ಣ ಪ್ರತಿಮೆ, ಡಾ.ಬಿ.ಅರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಕನಕ ಮಂದಿರಕ್ಕೆ ಭೇಟಿ ಕೊಟ್ಟು, ಅಲ್ಲಿಂದ ಮುಂದೆ ಹೋಗಿ ಯೋಗಿ ನಾರಾಯಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಇದನ್ನೂ ಓದಿ: ಸಿದ್ದರಾಮಯ್ಯಗೆ ಸ್ಪರ್ಧಿಸಲು ಕೋಲಾರ ವಿಧಾನಸಭಾ ಕ್ಷೇತ್ರ ಸೇಫ್: ಖಾಸಗಿ ಏಜೆನ್ಸಿಗಳ ಸಲಹೆ
ಇದಾದ ಬಳಿಕ ಕ್ಲಾಕ್ ಟವರ್ನಲ್ಲಿರುವ ದರ್ಗಾಕ್ಕೆ ಭೇಟಿ ನೀಡಿ ಪಾರ್ಥನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಕೋಲಾರ ನಗರದಿಂದ ನರಸಾಪುರದ ಕೆಸಿ ವ್ಯಾಲಿ ವೀಕ್ಷಣೆ ಮಾಡಿ
ವೇಮಗಲ್ ಹೋಬಳಿ ಸೀತಿ ಬೆಟ್ಟದ ಭೈರವೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು. ಅಲ್ಲಿಂದ ಗರುಡಪಾಳ್ಯದಲ್ಲಿರು ದಿವಂಗತ ಬೈರೇಗೌಡ ಸಮಾಧಿಗೆ ಗೌರವ ಸಮರ್ಪಣೆ, ಮಾಜಿ ಸಚಿವ ಕೃಷ್ಣಬೈರೇಗೌಡರ ಮನೆಯಲ್ಲಿ ಊಟ ಮಾಡಿ ಅಲ್ಲೇ ವಿವಿಧ ಸಮುದಾಯದ ಮುಖಂಡರು ಹಾಗೂ ಹಾಗೂ ಕಾರ್ಯಕರ್ತರ ಜೊತೆ ಚರ್ಚೆ ಮಾಡಿದರು.
ಕೆಎಚ್ ಮುನಿಯಪ್ಪ ಬೆಂಬಲಿಗರ ಭೇಟಿ: ಇಡೀ ದಿನ ಜನಸ್ತೋಮ, ತಳ್ಳಾಟ ನೂಕಾಟದಿಂದ ಸಿದ್ದರಾಮಯ್ಯ ಕೆಲಕಾಲ ಹೈರಾಣರಾಗಿದ್ದರು. ಇದರ ನಡುವೆ ಕೆಎಚ್ ಮುನಿಯಪ್ಪ ಬೆಂಬಲಿಗರು ಸಿದ್ದರಾಮಯ್ಯ ಅವರನ್ನು ಬೇಟಿ ಮಾಡಿ ಯಾವುದೇ ಕಾರಣಕ್ಕೂ ಕೆಎಚ್ ಮುನಿಯಪ್ಪ ಅವರನ್ನು ಕಡೆಗಣಸಿದಂತೆ ಒತ್ತಾಯಿಸಿದರು. ಇನ್ನು, ಕೋಲಾರಕ್ಕೆ ಸಾಕಷ್ಡು ಕೊಡುಗೆಯನ್ಮು ನೀಡಿರುವ ಸಿದ್ದರಾಮಯ್ಯ ಅವರನ್ನು ಕೋಲಾರದಿಂದ ಸ್ಪರ್ಧೆ ಮಾಡುವಂತೆ ಒತ್ತಾಯಿಸಿಲಾಗಿದೆ ಎಂದು ಶಾಸಕ ಕೃಷ್ಣಬೈರೇಗೌಡ ತಿಳಿಸಿದರು.
ಇದೇ ವೇಳೆ ಕೊನೆಯಲ್ಲಿ ಅಡ್ಡಗೋಡೆಯ ಮೇಲೆ ದೀಪವಿಟ್ಟ ಸಿದ್ದರಾಮಯ್ಯ, ಹೈಕಮಾಂಡ್ ಕ್ಷೇತ್ರವನ್ನ ಆಯ್ಕೆ ಮಾಡಿಕೊಳ್ಳಲು ತಿಳಿಸಿದ್ದು, ನಂತರ ಹೈಕಮಾಂಡ್ ಅಂತಿಮ ತೀರ್ಮಾನ ಮಾಡಲಿದೆ. ಜೊತೆಗೆ ಕೋಲಾರ ಕ್ಷೇತ್ರದ ಮೇಲೆಯೂ ಹೆಚ್ಚು ಪ್ರೀತಿ ಇರುವುದಾಗಿ ತಿಳಿಸಿದರು. ಒಟ್ಟಾರೆ ಕ್ಷೇತ್ರ ಹುಡುಕಾಟಕ್ಕೆ ಬಂದಿದ್ದ ಸಿದ್ದರಾಮಯ್ಯ ಅವರಿಗೆ ಕೋಲಾರದ ಜನತೆ ಅದ್ದೂರಿ ಸ್ವಾಗತ ನೀಡಿದರು. ಇಡೀ ದಿನ ಶಾಸಕರಾದ ರಮೇಶ್ ಕುಮಾರ್, ಶ್ರೀನಿವಾಸಗೌಡ, ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹ್ಮದ್, ಎಂ.ಎಲ್.ಅನಿಲ್ ಕುಮಾರ್, ಹೊಸಕೋಟಿ ಶಾಸಕ ಬಷ್ಚೇಗೌಡ, ಮಾಜಿ ಶಾಸಕ ಚಿಂತಾಮಣಿ ಸುಧಾಕರ್ ಸಾಥ್ ನೀಡಿದರು.
ಇದನ್ನೂ ಓದಿ: ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡದೆ ಬೇರೆ ಕಡೆ ಹೋಗುತ್ತಿದ್ದಾರೆ: ಸಿದ್ದರಾಮಯ್ಯ ಬಗ್ಗೆ ಬಿಎಸ್ವೈ ವ್ಯಂಗ್ಯ