ಕೋಲಾರ: ಬಾದಾಮಿ ಕ್ಷೇತ್ರ ನನಗೆ ದೂರವಾಗುತ್ತದೆ. ಹಾಗಾಗಿ ಹತ್ತಿರದ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪಧಿರ್ಸಲು ನಿರ್ಧಾರ ಮಾಡಿರುವುದಾಗಿ ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹತ್ತಿರದ ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧಾರ ಮಾಡಿದ್ದೇನೆ. ಆದರೆ ಯಾವ ಕ್ಷೇತ್ರ ಎಂದು ಇನ್ನೂ ತೀರ್ಮಾನ ಮಾಡಿಲ್ಲ. ಸ್ವಲ್ಪ ದಿನಗಳ ನಂತರ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಅಭಿಮಾನಿಗಳು ಅಭಿಮಾನದಿಂದ ಕರೆಯುತ್ತಿದ್ದಾರೆ. ಯಾವುದಾದರೂ ಒಂದು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುತ್ತೇನೆ. ಎರಡೆರಡು ಕ್ಷೇತ್ರಗಳಿಂದ ಸ್ಪರ್ಧಿಸುವುದಿಲ್ಲ ಎಂದು ಇದೇ ವೇಳೆ ಹೇಳಿದ್ದಾರೆ.
ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ಹಿನ್ನಡೆ, ಮುನ್ನಡೆಯಾಗುವುದು ರಾಜಕೀಯ ಪಕ್ಷಗಳಿಗೆ ಸ್ವಾಭಾವಿಕ. ಯಾವಾಗಲೂ ಗೆಲುವು ಸಾಧಿಸಲು ಆಗುವುದಿಲ್ಲ. ಬಿಜೆಪಿಯವರು 1980ರಲ್ಲಿ ಎರಡು ಸ್ಥಾನ ಮಾತ್ರ ಗೆದಿದ್ದರು, ಈಗ ವಿಜಯದ ಸ್ಥಾನದಲ್ಲಿದ್ದಾರೆ. ರಾಜಕೀಯ ನಿಂತ ನೀರಲ್ಲ, ಅದು ಸದಾ ಬದಲಾವಣೆಯಾಗುತ್ತಿರುತ್ತದೆ. ಜನರ ತೀರ್ಪುನ್ನು ನಾವು ಒಪ್ಪಬೇಕು ಎಂದು ಹೇಳಿದರು.
ಕೇಂದ್ರದಲ್ಲಿ ನಾಯಕರ ಬದಲಾವಣೆ ಕುರಿತು ಪ್ರಶ್ನಿಸಿದಾಗ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರೇ ನಾಯಕರಾಗಿರುತ್ತಾರೆ. ನಾಯಕತ್ವ ಬದಲಾವಣೆಯ ಪ್ರಶ್ನೆ ಇಲ್ಲ. ಮನಮೋಹನ್ ಸಿಂಗ್ ಎರಡು ಬಾರಿ ಪ್ರಧಾನಮಂತ್ರಿ ಆದಾಗ ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದರು. ಆಗ ನಾಯಕತ್ವ ಇರಲಿಲ್ಲವೇ? ವಾಜಪೇಯಿ, ಅಡ್ವಾನಿಯವರು ನಾಯಕರಲ್ಲವೇ? ಮೋದಿ ಅಧಿಕಾರಕ್ಕೆ ಬಂದಮೇಲೆ ಇದ್ದಕ್ಕಿದಂತೆ ನಾಯಕತ್ವ ಬೆಳೆದುಬಿಟ್ಟಿತಾ? ವಾಜಪೇಯಿಗಿಂತ ಮೋದಿ ದೊಡ್ಡ ನಾಯಕರಾ? ಎಂದು ಪ್ರಶ್ನಿಸಿದರು.
ಪಂಚ ರಾಜ್ಯಗಳಲ್ಲಿ ಒಂದು ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ನಮ್ಮ ತಪ್ಪಿನಿಂದ ಈಗ ಅಲ್ಲೂ ಸೋತಿದ್ದೇವೆ. ರಾಜ್ಯದಲ್ಲಿ ಬಿಜೆಪಿಗೆ ಸುಲಭ ಬಹುಮತ ಇದುವರೆಗೂ ಬಂದಿಲ್ಲ. ಅಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದರು.
ಸಿ ಎಂ ಇಬ್ರಾಹಿಂ ಪಕ್ಷ ತೊರೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿ.ಎಂ.ಇಬ್ರಾಹಿಂ ಪಕ್ಷದಿಂದ ಹೊರಗಡೆ ಹೊರಟಿದ್ದಾರೆ. ಯಾಕೆ ಹೋಗ್ತಿದ್ದಾರೋ ಗೊತ್ತಿಲ್ಲ. ಭದ್ರಾವತಿಯಲ್ಲಿ ಅವರಿಗೆ ಎಂಎಲ್ಎ ಟಿಕೆಟ್ ಕೊಡಲಾಗಿತ್ತು. ಅಲ್ಲಿ ಮೂರನೇ ಸ್ಥಾನಕ್ಕೆ ಹೋಗಿದ್ದರು. ಅವರನ್ನು ಎಂಎಲ್ಸಿ ಕೂಡಾ ಮಾಡಿದ್ದೇವೆ. ಪಕ್ಷದಿಂದ ಅವರಿಗೆ ಯಾವ ಅನ್ಯಾಯವೂ ಆಗಿಲ್ಲ. ಪ್ರತಿಪಕ್ಷದ ನಾಯಕನ ಸ್ಥಾನ ಸಿಕ್ಕಿಲ್ಲ ಎಂದು ಹೊರ ಹೋಗಿದ್ದಾರೆ. ಅವರು ಯಾವತ್ತೂ ಅಲ್ಪಸಂಖ್ಯಾತರ ಪರವಾಗಿ ಮಾತನಾಡಿಲ್ಲ. ಅವರು ನನ್ನ ಸ್ನೇಹಿತ, ಈಗಲೂ ಒಳ್ಳೆಯ ಸ್ನೇಹಿತರಾಗಿದ್ದೇವೆ. ಮುಂದೆ ಜನರ ಆಶೀರ್ವಾದದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಗೆದ್ದ ಮೇಲೆ ಎಂಎಲ್ಎಗಳು ಮತ್ತು ಹೈಕಮಾಂಡ್ ಸಿಎಂ ಯಾರು ಎಂಬುದನ್ನು ನಿರ್ಧಾರ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ರು.
ನನ್ನನ್ನು ಸೋಲಿಸಲು ಕೆಲವು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹುನ್ನಾರ ಮಾಡುತ್ತಿದ್ದಾರೆ. ಅವರಿಗೆ ನನ್ನನ್ನು ನೋಡಿದರೆ ಭಯ, ಹಾಗಾಗಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಜೆಡಿಎಸ್ ಪಕ್ಷವು ಬಿಜೆಪಿಯ ಬಿ ಟೀಂ, ಈಗಲೂ ಆ ಪಕ್ಷದ ಬಿಜೆಪಿ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿದೆ. ನಾನು ಹಿಂದು ವಿರೋಧಿ, ಜಾತ್ಯಾತೀತ ಪರವೆಂದು ಬಿಜೆಪಿಗೆ ಟಾಂಗ್ ನೀಡಿದರು. ಶಾಸಕ ಜಿ.ಟಿ.ದೇವೇಗೌಡ ಮತ್ತು ಅವರ ಮಗ ಟಿಕೆಟ್ ಕೇಳಿದ್ದಾರೆ. ಆ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
ಓದಿ : ಉಕ್ರೇನ್ನಲ್ಲಿ ಅಮೆರಿಕದ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬ್ರೆಂಟ್ ರೆನೌಡ್ ಹತ್ಯೆ