ಕೋಲಾರ: ಕೆಎಸ್ಆರ್ಟಿಸಿ ಬಸ್, ಟಾಟಾ ಏಸ್ ಟೆಂಪೋ ಹಾಗೂ ಬೈಕ್ ನಡುವಿನ ಅಪಘಾತದಲ್ಲಿ ತಂದೆ, ಮಗಳು ಸಾವನ್ನಪ್ಪಿರುವ ಘಟನೆ ಕೋಲಾರ ತಾಲೂಕಿನ ಶೆಟ್ಟಿಮಾದಮಂಗಲ ಬಳಿ ನಡೆಯಿತು.
ಕೋಲಾರ ಡಿಪೋಗೆ ಸೇರಿದ ಸಾರಿಗೆ ಸಂಸ್ಥೆಯ ಬಸ್ ಚಾಲಕ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಟಾಟಾ ಏಸ್ ಟೆಂಪೋಗೆ ಡಿಕ್ಕಿ ಹೊಡೆದಿದೆ. ನಂತರ ಟೆಂಪೋ ಹಿಂದೆ ಬರುತ್ತಿದ್ದ ಬೈಕ್ಗೆ ಡಿಕ್ಕಿಯಾಗಿ, ನಿಯಂತ್ರಣಕ್ಕೆ ಸಿಗದೆ ರಸ್ತೆ ಪಕ್ಕದಲ್ಲಿರುವ ಮರಕ್ಕೆ ಗುದ್ದಿದೆ. ಈ ವೇಳೆ ಬೈಕ್ನಲ್ಲಿದ್ದ ಅಪ್ಪ, ಮಗಳು ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಕೋಲಾರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ವಿಳಾಸ ಹಾಗೂ ಗುರುತು ಪತ್ತೆಯಾಗಿಲ್ಲ.
ಅಪಘಾತದ ರಭಸಕ್ಕೆ ಟೆಂಪೋ ಹಿಂಬದಿಯ ಕ್ಯಾಬಿನ್ ಕಿತ್ತು ಬಂದಿದ್ದು, ಬಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.