ಕೋಲಾರ: ಕೊರೊನಾ ಸೋಂಕು ಹಿನ್ನಲೆ ಅವೈಜ್ಞಾನಿಕವಾಗಿ ರಸ್ತೆ ಬಂದ್ ಮಾಡಿರುವ ಪರಿಣಾಮ ರೋಗಿಯನ್ನ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಪರದಾಡಿದ ಪ್ರಸಂಗ ಕೋಲಾರ ತಾಲೂಕಿನ ನರಸಾಪುರ ಗ್ರಾಮದಲ್ಲಿ ಜರುಗಿದೆ.
ಕೊರೊನಾ ಸೋಂಕು ಹೆಚ್ಚಿಗೆ ಕಾಣಿಸಿಕೊಂಡ ಹಿನ್ನೆಲೆ, ನರಸಾಪುರ ಗ್ರಾಮವನ್ನ ಕಂಟೇನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿ ಅನಾವಶ್ಯಕವಾಗಿ ತಿರುಗಾಡದಂತೆ ನಿರ್ಬಂಧ ಹೇರಲಾಗಿದೆ. ಆದರೆ ಕೋಲಾರದಿಂದ ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯೆ , ನರಸಾಪುರದ ಮುಖ್ಯ ರಸ್ತೆಯನ್ನೇ ಬಂದ್ ಮಾಡಲಾಗಿದೆ. ಇದರಿಂದಾಗಿ ನಿನ್ನೆ ರಾತ್ರಿ ರೋಗಿಯನ್ನ ಕರೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್ಗೆ ದಾರಿ ಕಾಣದ ಹಿನ್ನೆಲೆ ಕೆಲ ಕಾಲ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ಬಳಿಕ ಸ್ಥಳೀಯ ಯುವಕರಾದ ಹರೀಶ್, ಗೋಪಿ, ಮಾರುತಿ, ಪ್ರಕಾಶ್ ಇನ್ನಿತರ ಯುವಕರು, ಆ್ಯಂಬುಲೆನ್ಸ್ಗೆ ದಾರಿ ಮಾಡಿಕೊಟ್ಟಿದ್ದಾರೆ. ಇನ್ನು ಮುಖ್ಯ ರಸ್ತೆಯನ್ನೇ ಬಂದ್ ಮಾಡಿದವರ ವಿರುದ್ದ ರೋಗಿಗಳ ಸಂಬಂಧಿಕರು ಹಿಡಿಶಾಪ ಹಾಕುತ್ತಿದ್ದಾರೆ. ಅಲ್ಲದೇ ವೇಮಗಲ್ ಹಾಗೂ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯನ್ನ ಬಂದ್ ಮಾಡಿರುವ ಪರಿಣಾಮ, ತುರ್ತು ಪರಿಸ್ಥಿತಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.