ಕೋಲಾರ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಯುವಕನೋರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದಲ್ಲಿ ಜರುಗಿದೆ.
ಕೆಜಿಎಫ್ ನಗರದ ಆಂಡರ್ ಸನ್ ಪೇಟೆಯಲ್ಲಿ ಈ ಘಟನೆ ಜರುಗಿದ್ದು, ನಗರದ ಮಸ್ಕಾಂ ನಿವಾಸಿಯಾದ ಸ್ಟಾಲಿನ್ ಎಂಬಾತ (22) ಸಾವನ್ನಪ್ಪಿದ್ದಾನೆ. ಇನ್ನು ನಗರದ ಸುರೇನ್, ಆಕಾಶ್, ಪ್ರಸನ್ನ ಕುಮಾರ್ ಹಾಗೂ ಸ್ಟಾಲಿನ್ ಮಧ್ಯೆ ಮಾರಾಮಾರಿ ನಡೆದಿದೆ ಎನ್ನಲಾಗಿದ್ದು, ಸ್ಟಾಲಿನ್ ಕೊಲೆಯಾಗಿದ್ದಾನೆ.
ಸ್ನೇಹಿತನ ವಿಚಾರಕ್ಕೆ ಸಂಭಂದಿಸಿದಂತೆ ಕಳೆದೆರಡು ದಿನಗಳ ಹಿಂದೆ ಸ್ಟಾಲಿನ್ ಹಾಗೂ ಮತ್ತೊಂದು ಗುಂಪಿನ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಅದ್ರಂತೆ ಕಳೆದ ರಾತ್ರಿ ಕೊಲೆಯಾದ ಸ್ಟಾಲಿನ್ ದ್ವಿಚಕ್ರ ವಾಹನದಲ್ಲಿ ಮೆಡಿಕಲ್ ಸ್ಟೋರ್ಗೆ ಹೋಗಿ ಬರುವಾಗ ದ್ವಿಚಕ್ರ ವಾಹನಗಳಲ್ಲಿ ಬಂದ ಸುರೇನ್, ಆಕಾಶ್, ಪ್ರಸನ್ನ ಕುಮಾರ್ ಎಂಬ ಯುವಕರು ಸ್ಟಾಲಿನ್ನನ್ನ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಬೈಕ್ ಸ್ಥಳದಲ್ಲಿಯೇ ಬಿಟ್ಟು ತಪ್ಪಿಸಿಕೊಳ್ಳಲು ಯತ್ನಿಸಿದ ಸ್ಟಾಲಿನ್ನನ್ನು ಸಿನಿಮೀಯ ರೀತಿಯಲ್ಲಿ ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ಇನ್ನು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸ್ಟಾಲಿನ್ನನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಆಂಡರ್ ಸನ್ ಪೇಟೆ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ತನಿಖೆ ಕೈಗೊಂಡಿದ್ದಾರೆ.