ಕೋಲಾರ: ದಕ್ಷ ಹಾಗೂ ಪ್ರಾಮಾಣಿಕ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ. ರವಿಯವರ ಕನಸಿನ ಯೋಜನೆ ಕಂದಾಯ ಅದಾಲತ್ ಅನ್ನು ಕೋಲಾರ ಜಿಲ್ಲೆಯಲ್ಲಿ ಮತ್ತೆ ಜಾರಿಗೆ ತರಲಾಗಿದೆ.
ಈ ಯೋಜನೆ ಮೂಲಕವೇ ಡಿ.ಕೆ.ರವಿ ಕೋಲಾರ ಜಿಲ್ಲೆಯ ಜನರ ಮನೆ ಮಾತಾಗಿ ಜನಮನ ಗೆದ್ದಿದ್ರು, ಅಲ್ಲದೆ ಈ ಮಾದರಿ ಯೋಜನೆ ಸರ್ಕಾರದ ಗಮನ ಸೆಳೆದು ಸಿದ್ದರಾಮಯ್ಯ ಸರ್ಕಾರದಲ್ಲಿ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗಿತ್ತು. ಆದರೆ ಡಿ.ಕೆ ರವಿಯವರ ನಂತರ ಯೋಜನೆ ಸ್ಥಗಿತಗೊಂಡಿತ್ತು. ಈಗ ಮತ್ತೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಕಂದಾಯ ಅದಾಲತ್ ಆರಂಭಿಸಿದ್ದಾರೆ. ಮೊದಲು ತಾಲೂಕು ಮಟ್ಟಗಳಲ್ಲಿ ಅದಾಲತ್ ಮೂಲಕ ಪಿಂಚಣಿ ಹಾಗೂ ಕಂದಾಯ ಇಲಾಖೆಯ ಅರ್ಜಿಗಳನ್ನು ಸ್ವೀಕರಿಸಿ ಒಂದೇ ದಿನದಲ್ಲಿ ಇತ್ಯರ್ಥ ಮಾಡಲಾಗುತ್ತಿದೆ.
ಈ ನಿಟ್ಟಿನಲ್ಲಿ ಇಂದು ಕೆಜಿಎಫ್ ತಾಲೂಕು ಮಟ್ಟದಲ್ಲಿ ನೂರಾರು ಜನರಿಗೆ ಒಂದೇ ಸೂರಿನಡಿ ಸಮಸ್ಯೆಗಳನ್ನು ಅದಾಲತ್ ಮೂಲಕ ಬಗೆಹರಿಸಲಾಯಿತು. ಈ ಅದಾಲತ್ ನಲ್ಲಿ ಪ್ರಮುಖವಾಗಿ ಪಿಂಚಣಿ, ವಿಧವಾ ವೇತನ, ಅಂಗವಿಕಲ ವೇತನ, ವೃದ್ಧಾಪ್ಯ ವೇತನಗಳ ಅರ್ಜಿ ಕುರಿತ ಸಮಸ್ಯೆಗಳ ಪರಿಹಾರಕ್ಕೆ ಸ್ಥಳದಲ್ಲೇ ಆದೇಶ ಮಾಡಿದ್ರೆ, ಕಂದಾಯ ಇಲಾಖೆಯ ಪಾವತಿ ವಾರಸುದಾರಿಕೆ ಬದಲಾವಣೆ, ಪಹಣಿ ತಿದ್ದುಪಡಿ, ಕಾಲಂ ನಂಬರ್-9, ಸೇರಿದಂತೆ ಹಲವು ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಲಾಗುತ್ತದೆ. ಇಂಥದೊಂದು ಯೋಜನೆ ಈಗ ಮತ್ತೆ ಜಿಲ್ಲೆಯಲ್ಲಿ ಆರಂಭವಾಗಿರೋದು ರೈತರಿಗೆ, ವೃದ್ಧರಿಗೆ ಹಾಗೂ ಬಡವರಿಗೆ ಸಂತಸ ತಂದಿದೆ.