ಕೋಲಾರ: ಇವಿಎಂ ಯಂತ್ರದ ಮೂಲಕವೇ ನಾನು ಗೆದ್ದಿರುವಂತಹದ್ದು. ಜನ ಬೇಡ ಎಂದಿದ್ದಾರೆ, ಹಾಗಾಗಿ ಉಪಚುನಾವಣೆಗಳಲ್ಲಿ ಸೋಲನುಭವಿಸಿದ್ದೇವೆ ಎಂದು ಕೋಲಾರದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ರಮೇಶ್ ಕುಮಾರ್ ಹೇಳಿದ್ರು.
ಕೋಲಾರ ತಾಲೂಕಿನ ಅಮ್ಮೇರಹಳ್ಳಿ ಕೆರೆಗೆ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ, ಬಿಹಾರ ಎಲೆಕ್ಷನ್, ರಾಜ್ಯ ಬೈ ಎಲೆಕ್ಷನ್ನಲ್ಲಿ ಜನರು ಕಾಂಗ್ರೆಸ್ ಬೇಡವೆಂದು ತೀರ್ಪು ನೀಡಿದ್ದಾರೆ. ದುಡುಕಿ ಮಾತನಾಡುವುದು, ಆವೇಶದಿಂದ ಮಾತನಾಡುವುದು ಸರಿಯಲ್ಲ ಎಂದು ಇವಿಎಂ ವಿರುದ್ಧ ಮಾತನಾಡುವವರಿಗೆ ರಮೇಶ್ ಕುಮಾರ್ ಟಾಂಗ್ ನೀಡಿದ್ರು.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಕೆಪಿಸಿಸಿ ಅಧ್ಯಕ್ಷ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒಟ್ಟಾಗಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಸಿಎಂ ಅಭ್ಯರ್ಥಿ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೋ ಹುಟ್ಟುಹಾಕಿದ್ದಾರೆ. ಚುನಾವಣೆ ನಡೆಯಬೇಕು, ಅದಾದ ಬಳಿಕ ಎಲ್ಲಾ ಶಾಸಕರು ಹಾಗೂ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಇದೇ ವೇಳೆ ನೀವು ಕೂಡ ಸಿಎಂ ಅಭ್ಯರ್ಥಿಯಲ್ಲವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಪಿಎಂ ಅಭ್ಯರ್ಥಿ ಎಂದು ವ್ಯಂಗ್ಯವಾಡಿದ್ರು. ಅಲ್ಲದೆ ಮುಂದಿನ ವಿಧಾನಸಭೆ ಚುನಾವಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕೋಲಾರ ಕ್ಷೇತ್ರದಿಂದ ಕಣ್ಣಕ್ಕಿಳಿಸುವ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಅಭಿಪ್ರಯಾಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾವುದೇ ಮಾತುಕತೆ ನಡೆದಿಲ್ಲ. ಹಾಗಾಗಿ ಅಂತಹ ಪ್ರಸ್ತಾವನೆ ಇಲ್ಲ ಎಂದು ಹೇಳಿದ್ರು.