ಕೋಲಾರ: ಸಾರಿಗೆ ನೌಕರರು ಹಾಗೂ ಸಾರಿಗೆಯನ್ನು ಅವಲಂಬಿಸಿರುವವರೆಲ್ಲರೂ ಮಧ್ಯಮ ವರ್ಗದವರು. ಮುಷ್ಕರವನ್ನ ಹತ್ತಿಕ್ಕುವ ಬದಲು ನೌಕರರ ಬೇಡಿಕೆ ಈಡೇರಿಸಿ ಎಂದು ಕೋಲಾರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ರು.
ಕೋಲಾರದ ಶ್ರೀನಿವಾಸಪುರದ ಕಾಂಗ್ರೆಸ್ ಕಚೇರಿಯಲ್ಲಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜನರನ್ನು ಅತಂತ್ರ ಸ್ಥಿತಿಗೆ ತಲುಪಿಸಿ ಸಾರಿಗೆ ನೌಕರರಿಗೆ ನೊಟೀಸ್ ಜಾರಿ ಮಾಡುವುದು ಸರಿಯಲ್ಲ. ಮುಷ್ಕರ ಹತ್ತಿಕ್ಕಲು ಸರ್ಕಾರ ಮುಂದಾಗಿದೆ ಹೊರತು ಅವರ ಬೇಡಿಕೆಗಳನ್ನು ಕೇಳುವ ಗೋಜಿಗೆ ಹೋಗಿಲ್ಲ ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ರು.
ಸಾರಿಗೆ ನೌಕರರ ವಿಚಾರದಲ್ಲಿ ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ನಡೆದುಕೊಳ್ಳುತ್ತಿದೆ. ನೌಕರರಿಗೆ ಎಸ್ಮಾ ಅಸ್ತ್ರ ಪ್ರಯೋಗ, ಕಾನೂನು ತೋರಿಸಿ ಬೆದರಿಸುವುದು ಸರಿಯಲ್ಲ.
ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿದೆ. ಆ ವಿಚಾರಕ್ಕೂ ನಮಗೂ ಸಂಬಂಧವಿಲ್ಲವೆನ್ನುವಂತಿರುವ ಸರ್ಕಾರ ಖಾಸಗಿಯವರಿಗೆ ಅನುಮತಿ ಕೊಟ್ಟು ಸಾರಿಗೆ ನೌಕರರ ಮೇಲೆ ಅರೋಪ ಮಾಡುತ್ತಿದೆ. ನನ್ನ ಅಂತಃಕರಣ ಕಾಳಜಿಯಿಂದ ಹೇಳುವೆ, ಸರ್ಕಾರ ಕೂಡಲೇ ನೌಕರರಿಗೆ ಸ್ಪಂದಿಸಬೇಕು. ನೌಕರರನ್ನು ಶತ್ರುಗಳ ರೀತಿ ನೋಡುವುದು ಸರಿಯಲ್ಲ. ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಹೇಳಿದ್ರು.
ಇದನ್ನೂ ಓದಿ: ಕಾಂಗ್ರೆಸ್ ನಾಯಕರ ಭಾಷಣದ ವೇಳೆ ಏಕಾಏಕಿ ಮಳೆ... ಕುರ್ಚಿ ತಲೆ ಮೇಲೆ ಹಿಡಿದು ನಿಂತ ಕಾರ್ಯಕರ್ತರು
ನಮ್ಮ ಒಲವು ದುಡಿಯುವ ವರ್ಗದವರ ಪರವಾಗಿರುತ್ತದೆ. ರಾಜ್ಯ ಸರ್ಕಾರದ ಸಿಎಂ ಸೇರಿ ಎಲ್ಲರೂ ಉಪಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಯುಗಾದಿ ಹಬ್ಬ ಸಮೀಪಿಸುತ್ತಿದ್ದು, ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ನೌಕರರ ಸಮಸ್ಯೆ ಇತ್ಯರ್ಥ ಮಾಡಬೇಕು ಎಂದು ಆಗ್ರಹ ಮಾಡಿದ್ರು.
ಅಲ್ಲದೆ ಸರ್ಕಾರ ನೌಕರರನ್ನು ಪರೋಕ್ಷವಾಗಿ ಹೆದುರಿಸಲು ಮುಂದಾದ್ರೆ ದಬ್ಬಾಳಿಕೆ, ದೌರ್ಜನ್ಯ ಮಾಡಿದ್ರೆ ಅದನ್ನು ಖಂಡಿಸುತ್ತೇವೆ. ನೌಕರರ ವರ್ಗಾವಣೆ ಮಾಡೋದಾದ್ರೆ ಅದು ತಪ್ಪು ಎಂದ ಅವರು, ಸಿದ್ದರಾಮಯ್ಯರಿಂದ ಆಡಳಿತ ನಡೆಸೋದನ್ನು ಕಲಿಯಬೇಕು ಎಂದು ಹೇಳಿದ್ರು.