ಕೋಲಾರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ರಣಕಹಳೆ ಊದಲು ಕೋಲಾರಕ್ಕೆ ಆಗಮಿಸಲಿದ್ದಾರೆ.
ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಕಾಂಗ್ರೆಸ್ ಪರಿವರ್ತನಾ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಕೆ.ಹೆಚ್.ಮುನಿಯಪ್ಪ ಪರ ಮತಯಾಚನೆ ಮಾಡಲಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಗೆ ದೇವನಹಳ್ಳಿಯಿಂದ ಕೋಲಾರಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸುವ ರಾಹುಲ್ ಗಾಂಧಿ, ಕೋಲಾರದಲ್ಲಿ ನಡೆಯುವ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಹುಲ್ ಗಾಂಧಿಗೆ ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಥ್ ನೀಡಲಿದ್ದಾರೆ.
ಬಿಗಿ ಬಂದೋಬಸ್ತ್...
ಇನ್ನು ಬಂದೋಬಸ್ತ್ ಕುರಿತು ಜಿಲ್ಲಾ ರಕ್ಷಣಾಧಿಕಾರಿ ರೋಹಿಣಿ ಕಟೋಚ್ ಮಾತನಾಡಿ, 5 ಎಸ್ಪಿ, 3 ಎಎಸ್ಪಿ, 200 ಮಂದಿ ಅಧಿಕಾರಿಗಳು, 10 ಸಿಆರ್ಪಿಎಫ್ ತುಕಡಿಗಳು ಸೇರಿದಂತೆ 1 ಸಾವಿರ ಮಂದಿಯನ್ನು ನಿಯೋಜನೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬರುವಂತಹ ವಾಹನಗಳಿಗೆ ಪ್ರತ್ಯೇಕ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.