ಕೋಲಾರ: ಕಾಂಗ್ರೆಸ್ ಸುಳ್ಳಿನ ಪಕ್ಷ, ಆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ನಡೆದಾಡುವ ಸುಳ್ಳಿನ ಯಂತ್ರ ಇದ್ದಂತೆ ಎಂದುಚಿಕ್ಕಮಗಳೂರುಶಾಸಕ ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್. ಮುನಿಸ್ವಾಮಿ ಪರವಾಗಿ ಪ್ರಚಾರ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ 60 ವರ್ಷಗಳಿಂದ ಸುಳ್ಳು ಹೇಳಿಕೊಂಡೇ ಕಾಂಗ್ರೆಸ್ನವರು ರಾಜಕೀಯ ಮಾಡುತ್ತಿದ್ದರು. ಮೋದಿ ಆಡಳಿತಕ್ಕೆ ಬಂದ ಮೇಲೆ ಅದಕ್ಕೆಲ್ಲ ಅಂತ್ಯ ಹಾಡಿದ್ದಾರೆ ಎಂದರು.
ಯಾವ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲವೋ, ಆ ಪಕ್ಷ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿದೆ. ಇಂದಿರಾಗಾಂಧಿಯಿಂದ ರಾಹುಲ್ಗಾಂಧಿವರೆಗೆ ಕುಟುಂಬ ರಾಜಕಾರಣ ಮಾಡಿದವರಿಗೆ ಪ್ರಜಾಪ್ರಭುತ್ವ ಎಲ್ಲಿ ಗೊತ್ತಿದೆ. ಕಾಂಗ್ರೆಸ್ನಲ್ಲಿ ಸರ್ವಾಧಿಕಾರ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ಗೆ ಟಾಂಗ್ ನೀಡಿದ್ರು.
ಮಾಲೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದ ವೇಳೆ ಮೋದಿ ಸರ್ವಾಧಿಕಾರಿ, ರಾಮಮಂದಿರ ಕಟ್ಟಲು ಮುಂದಾದವರನ್ನ ಬಿಜೆಪಿಯವರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಇದಕ್ಕೆ ತಿರುಗೇಟು ನೀಡಿದ ಸಿ.ಟಿ.ರವಿ, ರಾಮಮಂದಿರ ಕಟ್ಟೇ ಕಟ್ಟುತ್ತೇವೆ. ನಾವು ರಾಮಮಂದಿರ ಪರ, ಸಮಯಕ್ಕೆ ಬಣ್ಣ ಬದಲಾಯಿಸುವ ಗೋಸುಂಬೆಗಳಲ್ಲ. ಬೀದಿಗೊಂದು ನಾಟಕವಾಡಲ್ಲ. ಒಂದು ಕಡೆ ಕುಂಕುಮ ಮತ್ತೊಂದು ಕಡೆ ಟೋಪಿ ಹಾಕಿಕೊಂಡು ನಾಟಕವಾಡಲ್ಲ ಎಂದು ಕಾಂಗ್ರೆಸ್ಗೆ ಟಾಂಗ್ ನೀಡಿದ್ರು.
ಇನ್ನು ರಾಜ್ಯದಲ್ಲಿ ಮೋದಿ ಅಲೆ ಹೆಚ್ಚಾಗಿದ್ದು, ಮಂಡ್ಯ ಸೇರಿದಂತೆ ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.