ಕೋಲಾರ : ಕಳೆದೆರಡು ದಿನಗಳಿಂದ ಹೊಟ್ಟೆಯಲ್ಲಿರೋ ಮಗು ಬದುಕಿರದಿದ್ರೂ 6 ತಿಂಗಳ ಗರ್ಭಿಣಿ ನರಳಾಡುತ್ತಿರುವ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಿರುವಾರ ಗ್ರಾಮದ ಸೋಮಶೇಖರ್ ಎಂಬುವರ ಪತ್ನಿ ಸೌಮ್ಯ ಆರು ತಿಂಗಳ ಗರ್ಭಿಣಿಯಾಗಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಶ್ರೀನಿವಾಸಪುರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ತೆರಳುವಂತೆ ಅಲ್ಲಿನ ವೈದ್ಯರು ಸೂಚಿಸಿದ್ದರು. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಪರೀಕ್ಷೆ ಮಾಡಿ ಮಗು ಸಾವನ್ನಪ್ಪಿರುವುದನ್ನ ಖಚಿತಪಡಿಸಿದ್ದರು.
ಸದ್ಯ ಮಗುವನ್ನು ಹೊರ ತೆಗೆಯಲು ಇಂಜೆಕ್ಷನ್ ನೀಡಿದ್ದಾರೆ. ಈಗಾಗಲೇ ಗರ್ಭಿಣಿಯ ಗಂಟಲು ದ್ರವ ಸೇರಿ ರಕ್ತ ಮಾದರಿ ಕಲೆ ಹಾಕಲಾಗಿದೆ. ಫಲಿತಾಂಶ ಬಂದ ನಂತರ ಶಸ್ತ್ರ ಚಿಕಿತ್ಸೆ ಮಾಡುವುದಾಗಿ ವೈದ್ಯರು ಹೇಳಿದ್ದಾರೆ ಎನ್ನಲಾಗುತ್ತಿದೆ. ಮಗು ಸಾವನ್ನಪ್ಪಿದ ಬಳಿಕ ಹೀಗೆ ತಡ ಮಾಡುವ ಮೂಲಕ ವೈದ್ಯರು ನಿರ್ಲಕ್ಷ್ಯ ಮಾಡುತ್ತಿರುವುದು ಪೋಷಕರ ಕೆಂಗಣ್ಣಿಗೆ ಗುರಿಯಾಗಿದೆ. ಕಳೆದೆರಡು ದಿನಗಳಿಂದ ಆಸ್ಪತ್ರೆಯಲ್ಲೆ ಗರ್ಭಿಣಿ ಹಾಗೂ ಕುಟುಂಬಸ್ಥರು ಪರದಾಡುತ್ತಿದ್ದಾರೆ.