ಕೋಲಾರ : ಶ್ರೀ ನರಸಿಂಹ ರಾಜ ಜಿಲ್ಲಾಸ್ಪತ್ರೆ ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿದೆ. ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣವಾಗಿರುವ ಈ ಆಸ್ಪತ್ರೆ ಇಂದಿಗೂ ಶ್ರೀ ನರಂಸಿಂಹರಾಜ ಒಡೆಯರ್ ಧರ್ಮಾಸ್ಪತ್ರೆ ಎಂದೇ ಪ್ರಸಿದ್ಧಿ ಪಡೆದಿದೆ. ಅಂದಿನಿಂದ ಈವರೆಗೂ ನಿತ್ಯ ಸಾವಿರಾರು ಸಂಖ್ಯೆಯ ಬಡ ರೋಗಿಗಳು ಉಚಿತ ಚಿಕಿತ್ಸೆ ನೀಡುತ್ತಾ ಬಂದಿದೆ.
ಕೊರೊನಾ ರೋಗಿಗಳಿಗಾಗಿ ಇದೇ ಜಿಲ್ಲಾಸ್ಪತ್ರೆ ಆವರಣದಲ್ಲೇ 200 ಬೆಡ್ಗಳ ಕೋವಿಡ್ ಆಸ್ಪತ್ರೆ ನಿರ್ಮಾಣ ಮಾಡಿದೆ. ಪರಿಣಾಮ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರನ್ನು ಇದೇ ಆಸ್ಪತ್ರೆಯ ಒಂದು ಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಭಯಗೊಂಡ ಜನ ಈ ಆಸ್ಪತ್ರೆಗೆ ಬರೋದನ್ನೇ ಕಡಿಮೆ ಮಾಡಿದ್ದಾರೆ. ನಿತ್ಯ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ನೂರಾರು ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಜೊತೆಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಬಡ ಗರ್ಭಿಣಿಯರು ಇಲ್ಲಿ ಬಂದು ಉಚಿತ ಹೆರಿಗೆ ಮಾಡಿಸಿಕೊಂಡು ಹೋಗುತ್ತಿದ್ದರು.
ಕೊರೊನಾ ಆರಂಭಕ್ಕೂ ಮೊದಲು ತಿಂಗಳಿಗೆ ಸರಾಸರಿ 500 ಹೆರಿಗೆ ಆಗ್ತಿದ್ದರೇ ಈಗ ಅದು 300ಕ್ಕಿಳಿದಿದೆ. ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡ್ತಿರೋದ್ರಿಂದ ಗರ್ಭಿಣಿಯರ ಸಂಖ್ಯೆಯೂ ಸೇರಿ ಇತರ ರೋಗಿಗಳಿಗೂ ಇತ್ತ ಸುಳಿಯುತ್ತಿಲ್ಲ. ಈಗ ಹೊಸದಾಗಿ ಆವರಣದಲ್ಲಿ ತಾಯಿ ಮಗು ಆಸ್ಪತ್ರೆ ನಿರ್ಮಿಸಲಾಗಿದೆ. ಆದರೂ ಕೊರೊನಾ ಭಯಕ್ಕೆ ರೋಗಿಗಳು ಬರುತ್ತಿಲ್ಲ. ಬಡವರ ಧರ್ಮಾಸ್ಪತ್ರೆಗೆ ಕೊರೊನಾ ಕರಿನೆರಳು ಬಿದ್ದಿದೆ.
ಇದು ಖಾಸಗಿ ಆಸ್ಪತ್ರೆಗಳಿಗೆ ವರವಾಗಿ ಪರಿಣಮಿಸಿದೆ. ಬಡವರನ್ನು ಸುಲಿಗೆ ಮಾಡಲು ದಾರಿ ಮಾಡಿಕೊಟ್ಟಂತಾಗಿದೆ. ಇತ್ತ ಕೊರೊನಾ ಭಯದಲ್ಲಿ ಜನ ಸರ್ಕಾರಿ ಆಸ್ಪತ್ರೆಗೆ ಬರೋದಕ್ಕೆ ಭಯಪಡುತ್ತಿದ್ದಾರೆ.