ಕೋಲಾರ : ಮತಾಂತರವನ್ನು ಬಲವಂತವಾಗಿ ಮಾಡಬಾರದು ಎಂಬ ಕಾಯ್ದೆ ಇದೆ. ಆದರೆ, ಒಂದು ಧರ್ಮವನ್ನು ಗುರಿಯಾಗಿಟ್ಟುಕೊಂಡು ರಾಜಕೀಯ ಮಾಡೋದು ಸರಿಯಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಹೇಳಿದರು.
ನಗರದ ಹೊರವಲಯದಲ್ಲಿರುವ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಭೇಟಿ ನೀಡಿ ಕೇಂದ್ರದ ಮಾಜಿ ಸಚಿವ ಆರ್ ಎಲ್ ಜಾಲಪ್ಪನವರ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಗೆಲುವಿನ ನಿರೀಕ್ಷೆ ಇದೆ : ವಿಧಾನ ಪರಿಷತ್ ಚುನಾವಣೆಯಲ್ಲಿ 15 ಸ್ಥಾನದಲ್ಲಿ ಗೆಲ್ಲುತ್ತೇವೆ. ಕೋಲಾರದಲ್ಲಿ ಕೂಡ ಅನಿಲ್ ಕುಮಾರ್ ಗೆಲ್ಲುತ್ತಾರೆ. ಜೆಡಿಎಸ್ನವರು 6 ಕಡೆ ಅಭ್ಯರ್ಥಿ ಹಾಕಿದ್ದಾರೆ. ಉಳಿದ 19 ಕಡೆ ಅಭ್ಯರ್ಥಿಗಳನ್ನು ಹಾಕಿಲ್ಲ. ಜೆಡಿಎಸ್ನವರು ಬಿಜೆಪಿಗೆ ಮತ ಹಾಕಿಸಿರುತ್ತಾರೆ. ಜನತಾ ದಳ ಎಂದಿಗೂ ಬಿಜೆಪಿಯ 'ಬಿ' ಟೀಮ್ ಎಂದು ಆರೋಪಿಸಿದರು.
ಜೆಡಿಸ್ ಬಿಜೆಪಿ 'ಬಿ' ಟೀಮ್ : ಕಾಂಗ್ರೆಸ್ನವರು ಯಾವತ್ತೂ ಜೆಡಿಎಸ್ ಮನೆ ಬಾಗಿಲಿಗೆ ಹೋಗಿ ನಮ್ಮ ಜೊತೆ ಅಧಿಕಾರ ಮಾಡಿ ಎಂದು ಕೇಳಿಲ್ಲ.ಆಗ ಮಾತುಕತೆ ಆಗಿದ್ದು ನಿಜ. ಆದರೆ, ನಾನಂತೂ ಅವರ ಮನಗೆ ಹೋಗಿಲ್ಲ. ನಾನು 'ಬಿ' ಟೀಮ್ ಅಂದರೆ ಜೆಡಿಎಸ್ನವರು ಏಕೆ ರಿಯಾಕ್ಟ್ ಮಾಡಬೇಕು.
ಕುಂಬಳಕಾಯಿ ಕಳ್ಳ ಅಂದ್ರೆ ಏಕೆ ಹೆಗಲು ಮುಟ್ಕೊಂಡು ನೋಡಿಕೊಳ್ಳಬೇಕು. ಗೋಹತ್ಯೆ ನಿಷೇಧ ಕಾಯ್ದೆಯನ್ನು ಜೆಡಿಸ್ನವರು ಏಕೆ ವಿರೋಧ ಮಾಡಿಲ್ಲ. ಕೊರೊನಾ ಸಮಯದಲ್ಲಿ ಅಸೆಂಬ್ಲಿಯಲ್ಲಿ ಬಿಜೆಪಿಗೆ ಸಹಕಾರ ನೀಡಿದರು. ಹಾಗಾಗಿ, ಇವರು 'ಬಿ' ಟೀಮ್ ಎಂದು ವ್ಯಂಗ್ಯವಾಡಿದರು.
ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗುತ್ತಿದೆ. ಬೆಳೆಹಾನಿ, ಕೊರೊನಾ ಪರಿಹಾರ,ಬಿಟ್ ಕಾಯಿನ್, ಮತಾಂತರ ಕಾಯ್ದೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಮೊಟ್ಟೆ ವಿಚಾರ : ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಮಠಾಧೀಶರ ಬಗ್ಗೆ ಮಾತನಾಡೋದಿಲ್ಲ. ಆಹಾರ ಪದ್ಧತಿ ಅವರವರಿಗೆ ಬಿಟ್ಟಿರೋ ವಿಚಾರ. ಮೊಟ್ಟೆ ಯಾರು ತಿನ್ನುತಾರೋ ಅವರಿಗೆ ಕೊಡಿ, ಇಲ್ಲ ಅಂದ್ರೆ ಕೊಡಬೇಡಿ ಎಂದರು.
ಹೈಕಮಾಂಡ್ ತೀರ್ಮಾನ ಅಂತಿಮ : ಮುಂದಿನ ಚುನಾವಣೆಯಲ್ಲಿ ಕೋಲಾರದಲ್ಲಿ ಸ್ಪರ್ಧಿಸುವ ಕುರಿತು ಮಾತನಾಡಿ, ನನ್ನನ್ನು ಬೇರೆ ಬೇರೆ ಕಡೆಗಳಲ್ಲಿ ಕರಿಯುತ್ತಿದ್ದಾರೆ. ನೋಡೋಣ ಮುಂದೆ ಹೈಕಮಾಂಡ್ ತೀರ್ಮಾನದಂತೆ ನಿಲ್ಲುತ್ತೇನೆ ಎಂದರು.
ಇದನ್ನೂ ಓದಿ: ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿ ಸುವರ್ಣ ವಿಧಾನಸೌಧ ಸಂಪೂರ್ಣ ಸಜ್ಜು