ಕೋಲಾರ : ಕುರಿ ಕದಿಯಲು ಬಂದ ಖದೀಮರು ಕುತ್ತಿಗೆಗೆ ಬಟ್ಟೆ ಬಿಗಿದು ಕುರಿಗಾಹಿಯನ್ನು ಕೊಂದಿರುವ ಘಟನೆ ಮುಳಬಾಗಿಲು ತಾಲೂಕಿನ ಕದಿರೇನಹಳ್ಳಿಯ ತೋಟದ ಮನೆಯಲ್ಲಿ ನಡೆದಿದೆ.
ಮುಳಬಾಗಿಲು ಪಟ್ಟಣದ ಪಳ್ಳಿಗರಪ್ಯಾಳದ ನಿವಾಸಿ ದೊಡ್ಡಮುನಿಸ್ವಾಮಿ (60) ಕೊಲೆಯಾದ ಕುರಿಗಾಹಿಯಾಗಿದ್ದಾರೆ. ಇವರು ಪಟ್ಟಣದ ಸುಮಾರು 5 ಕಿ.ಮೀ ದೂರದಲ್ಲಿರುವ ಕದಿರೇನಹಳ್ಳಿಯಲ್ಲಿ ಸುಮಾರು 40 ವರ್ಷಗಳಿಂದ ಕುರಿ ಮೇಯಿಸುವ ಕಾಯಕ ಮಾಡುತ್ತಿದ್ದರು.
ಅ.15 ರ ಗುರುವಾರ ಸಂಜೆ ಕುರಿಗಳನ್ನು ತೋಟದ ಮನೆಯಲ್ಲಿ ಕೂಡಿ ಹಾಕಿದ ದೊಡ್ಡಮುನಿಸ್ವಾಮಿ, ಮಗನಿಗೆ ಊಟ ತರುವಂತೆ ಹೇಳಿ ಪಕ್ಕದ ಮನೆಯಲ್ಲಿ ಮಲಗಲು ಹೋಗಿದ್ದರು. ಈ ಸಮಯದಲ್ಲಿ ಆಟೋದಲ್ಲಿ ಬಂದ ಇಬ್ಬರು ಅಪರಿಚಿತರು, ಕುರಿ ಬೇಕು ಎಂದು ಕೇಳಿದ್ದರು. ದೊಡ್ಡಮುನಿ ಸ್ವಾಮಿ, ದೊಡ್ಡಿಯ ಬಾಗಿಲು ತೆಗೆದು ಕುರಿ ತೋರಿಸಲು ಮುಂದಾಗಿದ್ದರು. ಈ ವೇಳೆ, ಮುಖಕ್ಕೆ ಮಾಸ್ಕ್ ಧರಿಸಿ ಬಂದಿದ್ದ ಆ ಇಬ್ಬರು ವ್ಯಕ್ತಿಗಳು, ದೊಡ್ಡಮುನಿಸ್ವಾಮಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಸಾಯಿಸಿದ್ದಾರೆ. ಜೊತೆಗೆ ಅಲ್ಲೇ ಇದ್ದ ನಾಲ್ಕು ಕುರಿಗಳನ್ನು ಕಾಲು ಕಟ್ಟಿ ಆಟೋಗೆ ಎತ್ತಾಕಿಕೊಂಡು ಹೊರಡಲು ಸಿದ್ದರಾಗಿದ್ದರು. ಈ ವೇಳೆ, ಊಟ ತರಲು ಮನೆಗೆ ಹೋಗಿದ್ದ ದೊಡ್ಡಮುನಿಸ್ವಾಮಿಯವರ ಮಗ ಸ್ಥಳಕ್ಕೆ ಬಂದಿದ್ದ. ಆತನನ್ನು ಕಂಡ ಖದೀಮರು, ಕುರಿಗಳನ್ನು ಅಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.
ಇನ್ನು, ಈ ಭಾಗದಲ್ಲಿ ಹಲವರು ಕುರಿ ಶೆಡ್ಗಳನ್ನು ಮಾಡಿ ಕೊಂಡಿದ್ದಾರೆ. ನಿರ್ಜನ ಪ್ರದೇಶವಾಗಿರುವುದರಿಂದ, ಇಲ್ಲಿ ಕಳ್ಳರ ಕಾಟವೂ ಹೆಚ್ಚಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುರಿ ಕದಿಯಲು ಬಂದಿದ್ದ ಖದೀಮರು ಆಟೋವನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದು, ಅದರ ಗುರುತು ಹಿಡಿದು ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.