ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ರಂಗೇರಿದ್ದು, ಮಾಜಿ ಶಾಸಕ ಕೊತ್ತುರು ಮಂಜುನಾಥ್ ಬೆಂಬಲಿತ 45 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಮಾಜಿ ಶಾಸಕ ಕೊತ್ತೂರು ಮಂಜುನಾಥ್, ಮುಳಬಾಗಿಲು ತಾಲೂಕಿನಲ್ಲಿ ಅವಿರೋಧವಾಗಿ ಆಯ್ಕೆಯಾದ ಎಲ್ಲಾ ಸದಸ್ಯರನ್ನು ಅಭಿನಂದಿಸಿದ್ದಾರೆ. ತಾಲೂಕಿನ 470 ಗ್ರಾಮ ಪಂಚಾಯ್ತಿಗಳಲ್ಲಿಯೂ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಾಗಿ ಘೋಷಿಸಿದ್ದಾರೆ. ಆದರೆ ನಮ್ಮ ಅಭ್ಯರ್ಥಿಗಳನ್ನು ಕೆಲವು ಮುಖಂಡರು ನಮ್ಮವರು ಎಂದು ಅಪಪ್ರಚಾರ ಮಾಡಲು ಹೊರಟಿದ್ದಾರೆ ಎಂದು ಪರೋಕ್ಷವಾಗಿ ಸಚಿವ ನಾಗೇಶ್ ಹಾಗೂ ಜೆಡಿಎಸ್ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ನಾನು ಶಾಸಕನಾಗಿದ್ದ ವೇಳೆ ತಾಲೂಕಿನಲ್ಲಿ ಎಲ್ಲಾ ಪಂಚಾಯ್ತಿಯಲ್ಲಿ ಅಭಿವೃದ್ಧಿ ಕೆಲಸ ಮಾಡಿರುವೆ. ನನ್ನ ಸ್ವಂತ ನೆರವು ನೀಡಿ ಜನರ ಸಂಕಷ್ಟಕ್ಕೆ ಸ್ಪಂದಿಸಿರುವೆ. ಹೀಗಾಗಿ ನಾನು ಜನರ ಬಳಿ ಮತ ಕೇಳಲು ಹೊರಟಿದ್ದೇನೆ ಎಂದರು. ಮುಂದೆಯೂ ಇದೇ ಕ್ಷೇತ್ರದಲ್ಲಿ ಇರುವೆ. ನನಗೆ ಕ್ಷೇತ್ರದ ಜನತೆಯೇ ದೇವರುಗಳು ಎಂದ ಅವರು, ಕ್ಷೇತ್ರವನ್ನು ಬಿಡುವ ಮಾತೇ ಇಲ್ಲ ಎಂದರು.