ಕೋಲಾರ: ಅಬಕಾರಿ ಸಚಿವರ ತವರು ಕ್ಷೇತ್ರದಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಕಾವು ಜೋರಾಗಿದ್ದು, ಸಚಿವರು ಹಾಗೂ ಮಾಜಿ ಶಾಸಕರ ನಡುವಿನ ಮುಸುಕಿನ ಗುದ್ದಾಟ ಜೋರಾಗಿದೆ.
ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ, ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ನಾಗೇಶ್ ತವರು ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಮುಂದುವರೆದಿದೆ. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಗ್ರಾಮ ಪಂಚಾಯತ್ ಅಖಾಡಕ್ಕಿಳಿದಿದ್ದು, ಯಾವುದೇ ಪಕ್ಷದ ಜೊತೆ ಸೇರದೆ ಚುನಾವಣೆ ನಡೆಸಲು ಮುಂದಾಗಿದ್ದಾರೆ. ಅಲ್ಲದೆ ಕಾರ್ಯಕರ್ತರೊಂದಿಗೆ ಚುನಾವಣಾ ತಯಾರಿ ನಡೆಸುತ್ತಿದ್ದಾರೆ.
ಸಚಿವ ಹೆಚ್. ನಾಗೇಶ್ ವಿರುದ್ಧ ಮಾಜಿ ಶಾಸಕ ಮಂಜುನಾಥ್, ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಸಜ್ಜಾಗಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ನನ್ನ ಬೆಂಬಲ ಸಹಾಯದಿಂದ ಗೆದ್ದವರು, ನನ್ನ ಬಿಟ್ಟು ಹೋಗಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು. ಅಲ್ಲದೆ ಮುಳಬಾಗಿಲು ನಗರದಲ್ಲಿರುವ ದೇವರುಗಳೆಲ್ಲಾ ಒಳ್ಳೆಯದು ಮಾಡಲಿ ಎಂದು ಸಚಿವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಅಲ್ಲದೆ ನಾನು ಇನ್ನೊಬ್ಬರನ್ನ ಗೆಲ್ಲಿಸುವಂತವನು, ನನ್ನನ್ನ ಇನ್ನೊಬ್ಬ ಲೀಡರ್ ಬಂದು ಗೆಲ್ಲಿಸಲು ಸಾಧ್ಯವಿಲ್ಲ. ನನ್ನ ಗೆಲ್ಲಿಸಬೇಕಾದರೆ ಈ ಜನರಿಂದ ಮಾತ್ರ ಸಾಧ್ಯ ಎಂದರು. ಅಲ್ಲದೆ ನಾನು ಸಹಾಯ ಮಾಡಿರುವವರು ನನಗೆ ಬೆಂಬಲ ಕೊಡುವುದೇನು? ಎಂದು ಪ್ರಶ್ನಿಸಿದರು. ಬೇಕಾದರೆ ಅವರಿಗೆ ಸಹಾಯ ಮಾಡುತ್ತೇನೆ, ಅವರಿಂದ ನನಗ್ಯಾವುದೇ ಸಹಾಯ ಬೇಡ ಎಂದು ಸಚಿವ ನಾಗೇಶ್ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: ಮುಳಬಾಗಿಲು ನಗರಸಭೆ ಚುನಾವಣೆ: ಕಿಂಗ್ ಮೇಕರ್ ಆದ ಸಚಿವ ನಾಗೇಶ್