ಕೋಲಾರ: ಎಂಟಿಬಿ ನಾಗರಾಜ್ ಸೇರಿದಂತೆ ವಿಶ್ವನಾಥ್ ಹಾಗೂ ಶಂಕರ್ ಅವರಿಗೆ ನ್ಯಾಯಬದ್ಧವಾಗಿ ಎಂಎಲ್ಸಿ ಸ್ಥಾನಕ್ಕೆ ಟಿಕೆಟ್ ನೀಡುವುದು ಸಮಂಜಸವಾಗಿದೆ. ಇದು ನನ್ನ ಅಭಿಪ್ರಾಯವೂ ಹೌದು ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ಹೇಳಿದ್ದಾರೆ.
ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಮನ್ವಂತರ ಪ್ರಕಾಶನ ಹಾಗೂ ಜನ ಸೇವಾ ಟ್ರಸ್ಟ್ನಿಂದ ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರಚನೆಯಾಗಲು ಈ ಮೂವರು ಸಹ ಪ್ರಮುಖರಾಗಿದ್ದಾರೆ. ಇನ್ನು ಎಂಟಿಬಿ ನಾಗರಾಜ್ ಸೇರಿದಂತೆ ವಿಶ್ವನಾಥ್ ಹಾಗೂ ಶಂಕರ್ಗೆ ಎಂಎಲ್ಸಿ ಸ್ಥಾನಕ್ಕೆ ಟಿಕೆಟ್ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಚಿವ ನಾಗೇಶ್ ಅಭಿಪ್ರಾಯಪಟ್ಟಿದ್ದಾರೆ.
ನಾನು ಸೇರಿದಂತೆ 18 ಜನರು ಬಿಜೆಪಿಯ ಕಷ್ಟ ಕಾಲದಲ್ಲಿ ಕೈ ಹಿಡಿದಿದ್ದೇವೆ. ಹೀಗಾಗಿ ನಾನು ಸಹ ಅವರ ಪರವಾಗಿ ಎಂಎಲ್ಸಿ ಸ್ಥಾನಕ್ಕೆ ಟಿಕೆಟ್ ನೀಡುವಂತೆ ಒತ್ತಾಯ ಮಾಡುತ್ತೇನೆ. ಬಿಜೆಪಿ ಸರ್ಕಾರ ರಚನೆಯಾಗಿ ಆಡಳಿತ ನಡೆಸಲು ಇವರೆಲ್ಲರೂ ಕಾರಣ ಎಂದು ಅಬಕಾರಿ ಸಚಿವರು ಹೇಳಿದ್ದಾರೆ.
ಇನ್ನು ಯಡಿಯೂರಪ್ಪ ಅವರು ಮಾತು ಕೊಟ್ಟರೆ ಎಂದಿಗೂ ತಪ್ಪುವುದಿಲ್ಲ. ಮಾತು ಕೊಟ್ಟರೆ ಅದರಂತೆ ನಡೆದುಕೊಳ್ಳುವಂತಹ ಗುಣ ಅವರಲ್ಲಿ ಇದೆ. ನನ್ನ ಎರಡು ವರ್ಷದ ಅನುಭವದಲ್ಲಿ ನುಡಿದಂತೆ ನಡೆದ ಧೀಮಂತ ನಾಯಕ ಯಡಿಯೂರಪ್ಪ ಎಂದು ಸಚಿವ ನಾಗೇಶ್ ಬಿಎಸ್ವೈ ಅವರನ್ನು ಹೊಗಳಿದ್ದಾರೆ.