ಕೋಲಾರ : ಸ್ವಪಕ್ಷೀಯರೆ ಕಾಲು ಎಳೆಯುತ್ತಿದ್ದಾರೆ, ಬಿಜೆಪಿ ಮೇಲೆ ಗೂಬೆ ಕೂರಿಸುವ ಬದಲು ಅದನ್ನು ಸರಿಮಾಡಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಸಂಸದ ಎಸ್.ಮುನಿಸ್ವಾಮಿ ಟಾಂಗ್ ನೀಡಿದ್ದಾರೆ.
ನಗರದ ನಳಂದ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಂಘ ಪರಿವಾರದ ಹಿರಿಯ ಮುಖಂಡ ಪಾರ್ಥಸಾರಥಿ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಪಕ್ಷೀಯರಾದ ಸಿದ್ದರಾಮಯ್ಯ ಅವರೇ ಡಿ.ಕೆ.ಶಿವಕುಮಾರ್ ಕಾಲು ಎಳೆಯುತ್ತಿದ್ದಾರೆ. ವಿರೋಧ ಪಕ್ಷದ ವಿರುದ್ದ ಮಾತನಾಡದೆ, ತಮ್ಮ ಪಕ್ಷದವರನ್ನು ಮೊದಲು ಸರಿ ಮಾಡಿಕೊಳ್ಳಲಿ ಎಂದರು.
ಡಿಕೆಶಿಗೆ ಆರೋಪ ಮಾಡುವುದಕ್ಕೆ ಏನೂ ಇಲ್ಲ, ಪ್ರತಿ ಬಾರಿ ಸಿಬಿಐ ನೋಟಿಸ್ ಕೊಟ್ಟಾಗಲೂ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಾರೆ. ತಪ್ಪು ಮಾಡಿಲ್ಲವೆಂದರೆ ಭಯವೇಕೆ..? ದಾಖಲಾತಿಗಳು ನೀಡಿ ಹೊರಬರಲಿ. ಉಪಚುನಾವಣೆಗಳು ನೋಡಿಕೊಂಡು ಸಿಬಿಐ ನೋಟೀಸ್ ನೀಡುತ್ತಿಲ್ಲ. ಡಿಕೆಶಿ ಮೇಲೆ ಆರೋಪ ಇರುವುದರಿಂದ ಸಿಬಿಐ ನೋಟೀಸ್ ನೀಡಿದೆ ಎಂದು ಹೇಳಿದರು.